ಹರ್ದೋಯಿ (ಉತ್ತರಪ್ರದೇಶ): ಮಲವಿಸರ್ಜನೆ ಮಾಡಲು ಬಂದ ನಾಯಿಯನ್ನು ಓಡಿಸಲು ಯತ್ನಿಸಿದ, ಮಹಿಳೆ ಮತ್ತು ಆಕೆಯ ಮಗಳ ಮೇಲೆ ನಾಯಿ ಮಾಲೀಕರು ಥಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಬಿನಾ ಪಾಂಡೆ ಮತ್ತು ಅವರ ಮಗಳು ಕೌಶಿಕಿ ಭಾನುವಾರ ರಾತ್ರಿ ಊಟ ಮಾಡಿ, ವಾಕಿಂಗ್ ಮಾಡುತ್ತಿದ್ದರು. ಈ ವೇಳೆ, ನೆರೆಯ ಸಂಜೀವ್ ಪಾಂಡೆ ಅವರ ನಾಯಿ ಕಾಂಪೌಂಡ್ ಬಳಿ ಮಲವಿಸರ್ಜನೆ ಮಾಡುವುದನ್ನು ನೋಡಿದ್ದಾರೆ. ಬಳಿಕ ಇಬ್ಬರು ನಾಯಿಯನ್ನು ಓಡಿಸಲು ಮುಂದಾಗಿದ್ದಾರೆ. ಇದರಿಂದ ಕೋಪಗೊಂಡ ನಾಯಿ ಮಾಲೀಕರು ಅವರಿಬ್ಬರನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ.
ಹೀಗೆಲ್ಲಾ ಮಾತನಾಡಬೇಡಿ ಎಂದು ಬಿನಾ ಪಾಂಡೆ ಹೇಳಿದ್ದಕ್ಕೆ, ಪಾಂಡೆ ಮತ್ತು ಅವರ ಕುಟುಂಬದವರು ತಾಯಿ ಹಾಗೂ ಮಗಳ ಕೂದಲನ್ನು ಹಿಡಿದು ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಅಲ್ಲದೇ ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂತ್ರಸ್ತೆ ದೂರು ನೀಡಿದ್ದು, ಆರೋಪಿ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.