ನಳಂದ (ಬಿಹಾರ): 41 ವರ್ಷಗಳ ನಂತರ ಬಿಹಾರ ಷರೀಫ್ ನ್ಯಾಯಾಲಯದ ನ್ಯಾಯಮೂರ್ತಿ ಮಾನವೇಂದ್ರ ಮಿಶ್ರಾ ಅವರು ಐತಿಹಾಸಿಕ ತೀರ್ಪು ನೀಡಿದ್ದಾರೆ. ಕೋಟ್ಯಂತರ ಮೌಲ್ಯದ ಆಸ್ತಿ ದೋಚಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯವು ವ್ಯಕ್ತಿಯೊಬ್ಬನನ್ನು ದೋಷಿ ಎಂದು ಘೋಷಿಸಿ, ಮೂರು ವಿಭಿನ್ನ ಸೆಕ್ಷನ್‌ಗಳ ಅಡಿ ಶಿಕ್ಷೆ ವಿಧಿಸಿದೆ. ಪ್ರಮುಖ ವಿಷಯ ಎಂದರೆ ತೀರ್ಪು ಆಲಿಸಲು ನ್ಯಾಯಾಲಯದಲ್ಲಿ ಜನಸಾಗರವೇ ನೆರೆದಿತ್ತು.
ಏನಿದು ವಿಷಯ?: ಬೆನ್ ಪೊಲೀಸ್ ಠಾಣೆಯ ಮುರ್ಗವಾನ್ ಗ್ರಾಮದ ಭೂಮಾಲೀಕ ಕಾಮೇಶ್ವರ್ ಸಿಂಗ್ ಅವರಿಗೆ 7 ಪುತ್ರಿಯರಿದ್ದಾರೆ ಮತ್ತು ಕನ್ಹಯ್ಯಾ ಎಂಬ ಪುತ್ರ ಕೂಡಾ ಇದ್ದರು. ಮಗ ಕನ್ಹಯ್ಯ 1977ರಲ್ಲಿ 14ನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಹಾಜರಾಗುತ್ತಿದ್ದಾಗ ಚಾಂಡಿ ಹೈಸ್ಕೂಲ್‌ನಿಂದ ನಾಪತ್ತೆಯಾಗಿದ್ದರು.
ಈವರೆಗೆ ಆತನ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಆದರೆ, ನಾಲ್ಕು ವರ್ಷಗಳ ನಂತರ ಸಾಧು ವೇಷದಾರಿಯೊಬ್ಬ ಗ್ರಾಮಕ್ಕೆ ಬಂದಿದ್ದಾನೆ. ಆತ ಕಾಮೇಶ್ವರ್ ಸಿಂಗ್ ಅವರ ಮಗ ಕನ್ಹಯ್ಯಾ ಸಿಂಗ್ ಎಂದು ಹೇಳಿದಾಗ ಆ ಸುದ್ದಿ ಕೇಳಿ ತಂದೆ ಕಾಮೇಶ್ವರ್ ಸಿಂಗ್ ಅದ್ಧೂರಿ ಸ್ವಾಗತ ನೀಡಿ ಮನೆಗೆ ಕರೆದೋಯ್ದರು. ದುರಂತ ಎಂದರೆ 4 ವರ್ಷಗಳ ನಂತರ ಸನ್ಯಾಸಿ ವೇಷದಲ್ಲಿ ಬಂದಿದ್ದ ಯುವಕ ಕನ್ಹಯ್ಯಾ ಅಲ್ಲ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: ದೆಹಲಿಗೆ ದ್ರಾವಿಡ ನಾಡಿನ ಸಿಎಂ : ಪ್ರತಿಪಕ್ಷಗಳ ಒಗ್ಗಟ್ಟಿನ ಆಧಾರದಲ್ಲಿ ಹೊರ ಹೊಮ್ಮುತ್ತಿದ್ದಾರೆಯೇ ಎಂಕೆ ಸ್ಟಾಲಿನ್!?
ಈ ಘಟನೆ ತಿಳಿದ ನಂತರ ಸಹೋದರಿಯರು ಸಹ ಆತನನ್ನು ಸಹೋದರ ಎಂದು ಒಪ್ಪಿಕೊಳ್ಳಲು ನಿರಾಕರಿಸಿದರು. ನಂತರ 1981 ರಲ್ಲಿ ಸಿಲಾವ್ ಪೊಲೀಸ್ ಠಾಣೆಯಲ್ಲಿ ಆಸ್ತಿಯನ್ನು ಕಬಳಿಸುವ ಆಲೋಚನೆಯೊಂದಿಗೆ ಈತ ಈ ರೀತಿ ಮಾಡಿದ್ದಾನೆ ಎಂದು ಆರೋಪಿಸಿ ಮೊಕದ್ದಮೆ ಹೂಡಲಾಯಿತು. ಇದಾದ ನಂತರ ತನಿಖೆ ವೇಳೆ ಆರೋಪಿಯು ಮುಂಗೇರ್ ಜಿಲ್ಲೆಯ ಲಕ್ಷ್ಮೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ಲಖೈ ಗ್ರಾಮದ ನಿವಾಸಿ ದಯಾನಂದ ಗೋಸೈನ್ ಎಂದು ಗುರುತಿಸಲಾಯಿತು.
ನಕಲಿ ವ್ಯಕ್ತಿಗೆ 3 ವರ್ಷ ಜೈಲು: ಈ ವಿಷಯ ಸುಪ್ರೀಂ ಕೋರ್ಟ್‌ಗೆ ಹೋಗಿತ್ತು. ಆದರೆ, ಮತ್ತೆ ಕೆಳ ನ್ಯಾಯಾಲಯಕ್ಕೆ ಅದನ್ನು ವಿಚಾರಣೆಗೆ ರವಾನಿಸಲಾಯಿತು ಎಂದು ಸಹಾಯಕ ಪ್ರಾಸಿಕ್ಯೂಷನ್ ಅಧಿಕಾರಿ ರಾಜೇಶ್ ಪಾಠಕ್ ತಿಳಿಸಿದ್ದಾರೆ.
ಈ ವಿಚಾರದಲ್ಲಿ ಇಲ್ಲಿಯವರೆಗೆ ಹಲವು ತಿರುವುಗಳನ್ನು ಪ್ರಕರಣ ಪಡೆದುಕೊಂಡಿದೆ. ಸುಮಾರು 41 ವರ್ಷಗಳ ಬಳಿಕ ನ್ಯಾಯಾಧೀಶ ಮನ್ವೇಂದ್ರ ಮಿಶ್ರಾ ಅವರು ಭಾರತೀಯ ದಂಡ ಸಂಹಿತೆ 420, 419 ಮತ್ತು 120 ರ ಅಡಿಯಲ್ಲಿ ಅಪರಾಧಿ ದಯಾನಂದ ಗೋಸೈನ್ನನ್ನು ಜೈಲಿಗೆ ಕಳುಹಿಸಿದೆ. ನಕಲಿ ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿದೆ ಎಂದು ತಿಳಿದು ಬಂದಿದೆ.