ಮುಂಬೈ(ಮಹಾರಾಷ್ಟ್ರ): ಸುಪ್ರೀಂಕೋರ್ಟ್ ಮಹಾರಾಷ್ಟ್ರದ ಅಘಾಡಿ ಸರ್ಕಾರಕ್ಕೆ ವಿಶ್ವಾಸಮತಯಾಚನೆ ಮಾಡಲು ಆದೇಶ ನೀಡುತ್ತಿದ್ದಂತೆ ನಿನ್ನೆ ರಾತ್ರಿ ಫೇಸ್ಬುಕ್ ಲೈವ್‌ಗೆ ಬಂದ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದರು. ಇದೀಗ, ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗೆ ಬಿಜೆಪಿ ಸಕಲ ರೀತಿಯಲ್ಲೂ ತಯಾರಿ ನಡೆಸುತ್ತಿದೆ. ದೇವೇಂದ್ರ ಫಡ್ನವೀಸ್ ಮತ್ತೊಮ್ಮೆ ಸಿಎಂ ಸ್ಥಾನಕ್ಕೇರುವುದು ಬಹುತೇಕ ಖಚಿತವಾಗಿದೆ.
ರಾಜ್ಯದಲ್ಲಿ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿರುವ ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಗೆ ಶಿವಸೇನೆಯ ಬಂಡಾಯ ಶಾಸಕರು ಸಾಥ್ ನೀಡಿದ್ದಾರೆ. ಉದ್ಧವ್ ವಿರುದ್ಧ ಬಂಡೆದ್ದ ಶಾಸಕರು ಈಗಾಗಲೇ ಗೋವಾದ ಪಣಜಿಯಲ್ಲಿದ್ದು, ಮುಖ್ಯಸ್ಥ ಏಕನಾಥ್ ಶಿಂಧೆ ಮುಂಬೈಗೆ ಆಗಮಿಸಿದ್ದಾರೆ.
ಏಕನಾಥ್ ಶಿಂಧೆ ಇಂದು ಮಧ್ಯಾಹ್ನ ರಾಜ್ಯಪಾಲರು ಹಾಗೂ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಲಿದ್ದಾರೆ. ಹಾಗಾಗಿ, ಸರ್ಕಾರ ರಚನೆ ಕಸರತ್ತು ಮತ್ತಷ್ಟು ವೇಗ ಪಡೆದುಕೊಂಡಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ನಾಳೆ ರಾಜಭವನದಲ್ಲಿ ಫಡ್ನವೀಸ್ ಸಿಎಂ ಆಗಿಯೂ, ಏಕನಾಥ್ ಶಿಂಧೆ ಉಪಮುಖ್ಯಮಂತ್ರಿಯಾಗಿಯೂ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ: ಬಿಜೆಪಿಯ 105 ಶಾಸಕರು, ಬಂಡಾಯ ಶಿವಸೇನೆಯ 39 ಶಾಸಕರು, ಸ್ವತಂತ್ರ 13 ಶಾಸಕರು ಹಾಗೂ ಸಣ್ಣ ಪಕ್ಷಗಳ 10 ಮಂದಿ ಶಾಸಕರಿದ್ದಾರೆ.
ಮಹಾ ವಿಕಾಸ್ ಅಘಾಡಿ: ಎನ್ಸಿಪಿ 53, ಶಿವಸೇನೆ 16, ಕಾಂಗ್ರೆಸ್ 44 ಹಾಗೂ ಇತರೆ 6 ಶಾಸಕರಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಜೊತೆಯಾಗಿ ಸರ್ಕಾರ ರಚನೆ ಮಾಡಲು ಬೇಕಿರುವ ಸಂಖ್ಯಾಬಲ ಹೊಂದಿದೆ. ಇದಕ್ಕೆ ಇತರೆ ಪಕ್ಷಗಳ 9 ಶಾಸಕರ ಬೆಂಬಲವೂ ಇರುವುದರಿಂದ ರಾಜ್ಯದಲ್ಲಿ ಕಮಲ ಅರಳುವುದರಲ್ಲಿ ಯಾವುದೇ ಸಂದೇಹವಿಲ್ಲ.
ಇದನ್ನೂ ಓದಿ: ಪಣಜಿಯಲ್ಲಿ 'ಶಿಂದೆ ಸೇನಾ' ಶಾಸಕರ ಸಭೆ: ಮುಂಬೈನತ್ತ ಏಕನಾಥ್
ಯಾರಿಗೆಲ್ಲ ಮಂತ್ರಿಸ್ಥಾನ ಸಾಧ್ಯತೆ?: ದೇವೇಂದ್ರ ಫಡ್ನವೀಸ್(ಮುಖ್ಯಮಂತ್ರಿ), ಏಕನಾಥ್ ಶಿಂಧೆ(ಉಪಮುಖ್ಯಮಂತ್ರಿ), ಚಂದ್ರಕಾಂತ್ ಪಾಟೀಲ್, ಗಿರೀಶ್ ಮಹಾಜನ್, ಗಣೇಶ್ ನಾಯಕ್, ಸಂಭಾಜಿ ಪಾಟೀಲ್, ಗುಲಾಬ್ರಾವ್ ಪಾಟೀಲ್, ಉದಯ್ ಸಮಂತ್, ಅಬ್ದುಲ್ ಸತಾರ್, ಸಂಜಯ್ ರಾಥೋಡ್, ತಾನಾಜಿ ಸಾವಂತ್ ಪ್ರಮುಖರು.
ಇವರೊಂದಿಗೆ ಪ್ರಸಾದ್ ಲಾಡ್, ಜಯಕುಮಾರ್ ಗೋರ್, ಪ್ರಶಾಂತ್ ಠಾಕೂರ್, ಅಥುಲ್ ಸೇವ್, ಸುರೇಶ್ ಖಡೆ ಸಹ ಮಂತ್ರಿ ಸ್ಥಾನದ ರೇಸ್ನಲ್ಲಿದ್ದಾರೆ.