ಕ್ಯಾಲಿಫೋರ್ನಿಯಾ (ಅಮೆರಿಕ): ಕೋವಿಡ್ -19 ಲಸಿಕೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮತ್ತು ತಪ್ಪು ಮಾಹಿತಿಗಳು ಹರಿದಾಡುತ್ತಿವೆ. ಇದನ್ನು ತಡೆಗಟ್ಟಲು ಯೋಚಿಸಿರುವ ಫೇಸ್‌ಬುಕ್ ಇಂತಹ ಪೋಸ್ಟ್‌ಗಳನ್ನು ತೆಗೆದುಹಾಕಲು ಮುಂದಾಗಿದೆ.
ಆರೋಗ್ಯ ತಜ್ಞರು ಫೇಸ್ಬುಕ್ನಲ್ಲಿ ಹರಿದಾಡುತ್ತಿರುವ ಇಂತಹ ಪೋಸ್ಟ್‌ಗಳ ಬಗ್ಗೆ ಮಾಹಿತಿ ನೀಡಿದ್ದು, ಮುಂದಿನ ವಾರದಿಂದ ಇವುಗಳನ್ನು ತೆಗೆದುಹಾಕಲಾಗುವುದು. ಶೀಘ್ರದಲ್ಲೇ ಪ್ರಪಂಚದಾದ್ಯಂತ ಕೊರೊನಾ ಲಸಿಕೆಗಳು ಲಭ್ಯವಾಗಲಿದೆ ಎಂಬ ಸುದ್ದಿ ಕೇಳುತ್ತಿದ್ದಂತೆಯೇ ನಾವು ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಫೇಸ್‌ಬುಕ್ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಓದಿ: ಬಿ.ಎಲ್. ಸಂತೋಷ್ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ: ಹಣಕ್ಕೆ ಬೇಡಿಕೆ ಇಟ್ಟ ಖದೀಮರು
ಉದಾಹರಣೆಗೆ, ಕೋವಿಡ್ ಲಸಿಕೆಗಳು ಮೈಕ್ರೋಚಿಪ್‌ಗಳನ್ನು ಒಳಗೊಂಡಿವೆ ಅಥವಾ ಇತರ ಲಸಿಕೆಗಳಿಗಿಂತ ನಾನಾ ರೀತಿಯಲ್ಲಿ ಭಿನ್ನವಾಗಿದೆ. ಲಸಿಕೆಯ ಸುರಕ್ಷತೆಯನ್ನು ಪರೀಕ್ಷಿಸಲು ಕೆಲವರ ಮೇಲೆ ಅವರ ಒಪ್ಪಿಗೆಯಿಲ್ಲದೆ ಪ್ರಯೋಗಿಸಲಾಗುತ್ತಿದೆ. ಹೀಗೆ ಅನೇಕ ವದಂತಿಗಳು ಹರಿದಾಡಿತ್ತು. ಇಂತಹ ಮಾಹಿತಿಗಳು ಆರೋಗ್ಯಾಧಿಕಾರಿಗಳು, ತಜ್ಞರ ಗಮನಕ್ಕೆ ಬಂದಿದ್ದು, ಇದರ ವಿರುದ್ಧ ನಾವು ಕ್ರಮ ಕೈಗೊಳ್ಳಲೇ ಬೇಕಾಗಿದೆ ಎಂದು ಫೇಸ್‌ಬುಕ್ ಹೇಳಿದೆ.