ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಶಸ್ವಿಯಾಗಿ ಭಾರತ್ ಜೋಡೋ ಪಾದಯಾತ್ರೆ ಕೈಗೊಂಡಿದ್ದ ಕಾಂಗ್ರೆಸ್ ಈಗ ಮತ್ತೊಂದು ಯಾತ್ರೆಗೆ ಸಜ್ಜಾಗುತ್ತಿದೆ. ಮುಂಬರುವ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಹಾಗೂ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಸೆಪ್ಟೆಂಬರ್‌ನಲ್ಲಿ ರಾಹುಲ್ ಗಾಂಧಿ ಮುಂದಾಳತ್ವದಲ್ಲಿ ಭಾರತ್ ಜೋಡೋ ಯಾತ್ರೆ 2.0 ಪ್ರಾರಂಭಿಸಲು ಯೋಜನೆ ಹಾಕಿಕೊಂಡಿದೆ.
ಕಾಂಗ್ರೆಸ್ನ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ 2.0 ಕುರಿತು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ನೇತೃತ್ವದ ಭಾರತ್ ಜೋಡೋ ಯಾತ್ರೆಯ ರಾಷ್ಟ್ರೀಯ ಸಮನ್ವಯ ಸಮಿತಿಯು ಕಳೆದ ವಾರ ಆಯ್ದ ನಾಯಕರ ಗುಂಪಿನೊಂದಿಗೆ ಚರ್ಚಿಸಿದೆ. ಗುಜರಾತ್‌ನ ಪೋರಬಂದರ್‌ನಿಂದ ತ್ರಿಪುರಾದ ಅಗರ್ತಲಾವರೆಗೆ ಪಶ್ಚಿಮದಿಂದ ಪೂರ್ವ ಭಾರತವನ್ನು ಯಾತ್ರೆ ವಿಸ್ತರಿಸಲು ಯೋಜಿಸಲಾಗಿದೆ.
ಈ ಯಾತ್ರೆಗೆ ಪಕ್ಷದೊಳಗೆ ಒಮ್ಮತ ವ್ಯಕ್ತವಾಗಿದೆ. ಆದರೆ, ಯಾತ್ರೆಯ ದಿನಾಂಕ ಮತ್ತು ಸಾಗಬೇಕಾದ ಮಾರ್ಗಕ್ಕೆ ಸಂಬಂಧಿಸಿದ ಎರಡು ಪ್ರಮುಖ ಅಂಶಗಳು ಬಗ್ಗೆ ನಾಯಕರಲ್ಲಿ ಚರ್ಚೆಯಾಗುತ್ತಿವೆ. ಇದೇ ವೇಳೆ, ದಕ್ಷಿಣದಿಂದ ಉತ್ತರ ಭಾರತಕ್ಕೆ ಪಾದಯಾತ್ರೆ ಕೈಗೊಂಡಂತೆ ಪೂರ್ಣ ಪ್ರಮಾಣದಲ್ಲಿ ಪಶ್ಚಿಮದಿಂದ ಪೂರ್ವ ಭಾರತಕ್ಕೆ ಈ ಯಾತ್ರೆಯನ್ನು ವಿಸ್ತರಿಸಬೇಕೆ ಅಥವಾ ನಿರ್ದಿಷ್ಟ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾದಯಾತ್ರೆ ನಡೆಸಬೇಕೆಂಬ ಬಗ್ಗೆಯೂ ಸಮನ್ವಯ ಸಮಿತಿಯು ಚರ್ಚಿಸಿದೆ ಎಂದು ಪಕ್ಷದ ಒಳಗಿನವರು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಸಾಮಾಜಿಕ ಆಂದೋಲನ.. ಹಾಥ್ ಸೇ ಹಾಥ್ ಜೋಡೋ ರಾಜಕೀಯ ಅಭಿಯಾನ: ಕಾಂಗ್ರೆಸ್
ನಾವೆಲ್ಲರೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ 2.0 ನಡೆಯಬೇಕೆಂದು ಬಯಸುತ್ತೇವೆ. ಆದರೆ, ಈ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಎಂದು ಎಐಸಿಸಿ ಸಂಘಟನೆಯ ಉಸ್ತುವಾರಿ ಕಾರ್ಯದರ್ಶಿ ವಂಶಿ ಚಂದ್ ರೆಡ್ಡಿ 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ. ಈ ಯಾತ್ರೆಯು ಪೂರ್ಣ ಪ್ರಮಾಣ ಕೈಗೊಂಡರೆ ಅದಕ್ಕೆ ಆರು ತಿಂಗಳು ಸಮಯ ಬೇಕಾಗುತ್ತದೆ. ನವೆಂಬರ್‌ನಲ್ಲಿ ನಡೆಯಲಿರುವ ನಾಲ್ಕು ವಿಧಾನಸಭಾ ಚುನಾವಣೆಗಳು ಮತ್ತು 2024ರ ಲೋಕಸಭೆ ಚುನಾವಣೆಯೇ ಈ ಯಾತ್ರೆ ಗುರಿಯಾಗಿರುವುದರಿಂದ ದಿನಾಂಕ ನಿರ್ಣಾಯಕ ಅಂಶವಾಗಿದೆ ಎಂದು ಎಐಸಿಸಿಯ ಹಿರಿಯ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ವರ್ಷಭಾರತ್ ಜೋಡೋ ಯಾತ್ರೆಗೆ ಸಾಕಷ್ಟು ಸಮಯ ಇತ್ತು. ಇದೇ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆಗಳು ಎದುರಿಸಿದ ಗುಜರಾತ್ ಮತ್ತು ಹಿಮಾಚಲ ಪ್ರದೇಶವು ಯಾತ್ರೆಯ ಭಾಗವಾಗಿರಲಿಲ್ಲ. ಆದರೆ, ಪ್ರಮುಖ ವಿಧಾನಸಭಾ ಚುನಾವಣೆಗಳು ನವೆಂಬರ್‌ನಲ್ಲಿ ನಡೆಯುವ ಸಾಧ್ಯತೆಯಿರುವುದರಿಂದ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಯಾತ್ರೆಯನ್ನು ಆರಂಭಿಸಲು ಹಾಗೂ ಚುನಾವಣೆ ಎದುರಿಸುವ ರಾಜ್ಯಗಳಲ್ಲಿ ಯಾತ್ರೆ ಕೈಗೊಳ್ಳಲು ಯೋಜಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ 2.0ಕ್ಕೆ ಸಮಯ ಪ್ರಮುಖವಾಗಿರುವುದರಿಂದ ಪೂರ್ಣ ಪ್ರಮಾಣದ ಯಾತ್ರೆಯ ಬದಲು ರಾಜ್ಯಗಳಲ್ಲಿ ನಿರ್ದಿಷ್ಟವಾಗಿ ಯಾತ್ರೆ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ದೇಶಾದ್ಯಂತ ಮತ್ತೊಂದು ಸಂದೇಶವನ್ನು ರವಾನಿಸಲು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಯಾತ್ರೆಯನ್ನು ಪ್ರಾರಂಭಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಮುಂದಿನ ತಿಂಗಳು ಹವಾಮಾನ ಹಾಗೂ ಮಳೆಯ ಬಗ್ಗೆಯೂ ಚರ್ಚಿಸಲಾಗುತ್ತಿದೆ.
ಮೊದಲ ಭಾರತ್ ಜೋಡೋ ಯಾತ್ರೆಯನ್ನು 2022ರ ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭಿಸಲಾಗಿತ್ತು. 2023ರ ಜನವರಿ 30ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಈ ಯಾತ್ರೆ ಕೊನೆಗೊಂಡಿತ್ತು. ಈ ಯಾತ್ರೆ ಪ್ರಾರಂಭಿಸುವ ಮುನ್ನ ಸೆ.5ರಂದು ಅಹಮದಾಬಾದ್‌ನ ಮಹಾತ್ಮ ಗಾಂಧಿ ಸ್ಮಾರಕಕ್ಕೆ ರಾಹುಲ್ ಗಾಂಧಿ ಗೌವರ ನಮನ ಸಲ್ಲಿಸಿದ್ದರು. ಗುಜರಾತ್ ಮಹಾತ್ಮ ಗಾಂಧಿಯವರ ನಾಡಾಗಿರುವುದರಿಂದ ಈ ಮಹಾತ್ಮರ ಜನ್ಮಸ್ಥಳವಾದ ಪೋರಬಂದರ್‌ನಿಂದ ರಾಹುಲ್ ಗಾಂಧಿ ಈ ಬಾರಿಯ ಯಾತ್ರೆಯನ್ನು ಪ್ರಾರಂಭಿಸಿದರೆ ನಮಗೆ ತುಂಬಾ ಸಂತೋಷವಾಗಲಿದೆ ಎಂದು ಗುಜರಾತ್ ಸಿಎಲ್‌ಪಿ ನಾಯಕ ಅಮಿತ್ ಚಾವ್ಡಾ ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಬಲ ಹೆಚ್ಚಿಸಿದ ಭಾರತ್ ಜೋಡೋ.. ರಾಜ್ಯದಲ್ಲಿ ರಾಹುಲ್ ಗಾಂಧಿ ಹೆಜ್ಜೆ ಇಟ್ಟಲ್ಲೆಲ್ಲಾ ಕೈ ಕಿಲ ಕಿಲ