ಚೆನ್ನೈ (ತಮಿಳುನಾಡು): ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಸೋಮವಾರ ಭಾರಿ ಮಳೆ ಮುಂದುವರಿದಿದೆ. ತೂತುಕುಡಿ, ಕನ್ಯಾಕುಮಾರಿ, ತಿರುನಲ್ವೇಲಿ ಮತ್ತು ತೆಂಕಶಿ ಜಿಲ್ಲೆಗಳ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಈ ಜಿಲ್ಲೆಗಳಿಗೆ ಮತ್ತು ನೆರೆಯ ರಾಜ್ಯ ಕೇರಳಕ್ಕೆ ತೆರಳುವ ರೈಲುಗಳನ್ನು ರದ್ದು ಮಾಡಲಾಗಿದೆ. ತಮಿಳುನಾಡಿನ ದಕ್ಷಿಣದ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಂದೇ ಭಾರತ್ ಸೇರಿಂದ ರೈಲುಗಳು, ಬಸ್ ಸಂಚಾರ ರದ್ದು: ತಿರುನೆಲ್ವೇಲಿ ಮತ್ತು ಚೆನ್ನೈ ನಡುವೆ ಸಂಚರಿಸುವ ವಂದೇ ಭಾರತ್ ಸೇರಿದಂತೆ ವಿವಿಧ ರೈಲುಗಳನ್ನು ಭಾರಿ ಮಳೆ ಹಿನ್ನೆಲೆ ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಇಲಾಖೆ ತಿಳಿಸಿದೆ. ಚೆನ್ನೈನಿಂದ ಹೊರಡುವ ಗುರುವಾಯೂರ್ ಎಕ್ಸ್‌ಪ್ರೆಸ್, ತಿರುಚಿರಾಪಳ್ಳಿ - ತಿರುವನಂತಪುರ ಎಕ್ಸ್‌ಪ್ರೆಸ್, ನಾಗರ್‌ಕೋಯಿಲ್ - ಕೊಯಮತ್ತೂರು ಎಕ್ಸ್‌ಪ್ರೆಸ್, ತಿರುನಲ್ವೇಲಿ - ತಿರುಚೆಂದೂರ್ ಪ್ಯಾಸೆಂಜರ್ ಮತ್ತು ನಿಜಾಮುದ್ದೀನ್ - ಕನ್ಯಾಕುಮಾರಿ ಎಕ್ಸ್‌ಪ್ರೆಸ್, ಪರ್ಲ್ ಸಿಟಿ ಎಕ್ಸ್‌ಪ್ರೆಸ್, ಚೆನ್ನೈ ಎಗ್ಮೋರ್ - ಕ್ವಿಲಾನ್ ಎಕ್ಸ್‌ಪ್ರೆಸ್, ತಾಂಬರಂ - ನಾಗರ್‌ಕೋಯಿಲ್ ಎಕ್ಸ್‌ಪ್ರೆಸ್ ಸೇರಿದಂತೆ ಇತರೆ ರೈಲುಗಳು ಮಳೆಯಿಂದ ರದ್ದುಗೊಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ತೂತುಕುಡಿ, ಕನ್ಯಾಕುಮಾರಿ, ತಿರುನಲ್ವೇಲಿ ಮತ್ತು ತೆಂಕಶಿ ಜಿಲ್ಲೆಗಳಿಗೆ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ. ಭಾರಿ ಪ್ರವಾಹದಿಂದಾಗಿ ಪ್ರಾದೇಶಿಕ ಸಾರಿಗೆ ನಿಗಮಗಳು ನಡೆಸುತ್ತಿದ್ದ ಜಿಲ್ಲೆಯೊಳಗಿನ ಸ್ಥಳೀಯ ಬಸ್ ಸೇವೆಗಳನ್ನು ಸಹ ರದ್ದುಪಡಿಸಲಾಗಿದೆ.
ವಿವಿಧೆಡೆ ಅಬ್ಬರದ ಮಳೆ: ಪಾಳಯಂಕೊಟ್ಟೈನಲ್ಲಿ 26 ಸೆಂ.ಮೀ ಮತ್ತು ಕನ್ಯಾಕುಮಾರಿಯಲ್ಲಿ 17 ಸೆಂ.ಮೀ ಮಳೆಯಾಗಿದೆ. ತಿರುನಲ್ವೇಲಿ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಜನರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಪಡಿತರಕ್ಕಾಗಿ ಜನರು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದೆ. ತೂತುಕುಡಿ ಜಿಲ್ಲೆಯ, ತಾಲೂಕಿನ ಶ್ರೀವೈಕುಂಟಂನಲ್ಲಿ ಭಾನುವಾರ 525 ಮಿ.ಮೀ. ಮಳೆಯಾಗಿದ್ದು, ಈ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಜೊತೆಗೆ ತಿರುಚೆಂದರ್, ಸಾತಾಂಕುಳಂ, ಕಯತಾರ್ ಮತ್ತು ಒಟ್ಟಾಪಿದ್ರಂ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.
ಭಾನುವಾರ ಸಂಜೆ ತಿರುನಲ್ವೇಲಿಯ ಪಳಯಂಕೊಟ್ಟೈನಲ್ಲಿ 260 ಮಿ.ಮೀ ಮಳೆಯಾಗಿದೆ. ವಿರುದುನಗರ ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗಿದೆ. ವಿರುದುನಗರದ ಜಿಲ್ಲಾಧಿಕಾರಿಗಳು ಇಂದು (ಸೋಮವಾರ) ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಮಳೆಯಿಂದಾಗಿ ತಮಿಳುನಾಡು ಸರ್ಕಾರವು ತಿರುನಲ್ವೇಲಿ, ತೂತುಕುಡಿ, ಕನ್ಯಾಕುಮಾರಿ ಮತ್ತು ತೆಂಕಶಿ ಜಿಲ್ಲೆಗಳಲ್ಲಿ ಎಲ್ಲಾ ಶಾಲೆಗಳು, ಕಾಲೇಜುಗಳು, ಖಾಸಗಿ ಸಂಸ್ಥೆಗಳು, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ತೂತುಕುಡಿ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಕೋವಿಲ್‌ಪಟ್ಟಿ ಪ್ರದೇಶದಲ್ಲಿ 40 ಕೆರೆಗಳು ಪೂರ್ಣ ಭರ್ತಿಯಾಗಿವೆ ಎಂದು ತೂತುಕುಡಿ ಜಿಲ್ಲೆಯ ಜಿಲ್ಲಾ ಅಭಿವೃದ್ಧಿ ಅಧಿಕಾರಿ ರಾಜೇಶ್ ತಿಳಿಸಿದ್ದಾರೆ.
ನಾಳೆ (ಮಂಗಳವಾರ) ತಮಿಳುನಾಡಿನ ಕನ್ಯಾಕುಮಾರಿ, ತಿರುನಲ್ವೇಲಿ, ತೂತುಕುಡಿ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ತೂತುಕುಡಿ ಜಿಲ್ಲೆಯ ಕೋವಿಲ್‌ಪಟ್ಟಿ, ಎಟ್ಟಾಯಪುರಂ, ವಿಲತ್ತಿಕುಲಂ, ಕಲುಗುಮಲೈ, ಕಯತಾರ್, ಕಡಂಬೂರ್, ವೆಂಬಾರ್, ಸುರಂಗುಡಿ ಮತ್ತು ಇತರ ಪ್ರದೇಶಗಳಲ್ಲಿ ಭಾನುವಾರ ಬೆಳಗ್ಗೆಯಿಂದ ನಿರಂತರವಾಗಿ ಮಳೆಯಾಗುತ್ತಿದೆ.
ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ಪ್ರತಿಕ್ರಿಯೆ: ಸರ್ಕಾರದಿಂದ ಜನರ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ 250 ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು (SDRF) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳನ್ನು ಕನ್ಯಾಕುಮಾರಿ, ತಿರುನಲ್ವೇಲಿ, ಟುಟಿಕೋರಿನ್ ಮತ್ತು ತೆಂಕಶಿ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ ಎಂದು ತಮಿಳುನಾಡಿನ ಕಂದಾಯ ಮತ್ತು ವಿಪತ್ತು ನಿರ್ವಹಣೆ ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ತಿಳಿಸಿದ್ದಾರೆ.
ಇದನ್ನೂ ಓದಿ: ನೀರಿಗೆ ಬಿದ್ದ ಮಗು ರಕ್ಷಿಸಲು ಹೋದ ಒಂದೇ ಕುಟುಂಬದ ಐವರು ಸಾವು: ಎಲ್ಲರ ಮೃತದೇಹ ಪತ್ತೆ