ಪಂಜಾಬ್ : ಅಮೃತಸರ ಶ್ರೀ ಹರ್ಮಂದಿರ್ ಸಾಹಿಬ್ ಹೊರಗೆ ತಡರಾತ್ರಿ ಗ್ಲಾಸ್ ಕನ್ನಡಿ ಮುರಿದು ಅವಘಡ ಸಂಭವಿಸಿತು. ಹೊರಗಿನಿಂದ ಬಂದ ಯಾತ್ರಾರ್ಥಿಗಳು ಮತ್ತು ದರ್ಬಾರ್ ಸಾಹಿಬ್ ಹೊರಗೆ ಮಲಗಿದ್ದವರು ದಿಢೀರ್ ಸ್ಫೋಟದ ಶಬ್ದ ಕೇಳಿ ಭಯಭೀತರಾದರು. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಚಿಕಿತ್ಸೆ ನೀಡಲಾಗಿದೆ.
"ನಮಗೆ ಭಾರಿ ಸ್ಫೋಟವಾದ ಶಬ್ದ ಕೇಳಿಸಿತು. ತಕ್ಷಣ ಜ್ವಾಲೆ ಮತ್ತು ಹೊಗೆ ಏರಲು ಪ್ರಾರಂಭಿಸಿತು. ಕೆಲವು ಕಲ್ಲುಗಳ ಚೂರುಗಳು ನಮಗೆ ತಗುಲಿದ್ದು, ಕೆಲವರು ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದರು" ಎಂದು ಗೋಲ್ಡನ್ ಟೆಂಪಲ್ ಬಳಿ ಮಲಗಿದ್ದ ಮತ್ತು ಹೊರಗಿನಿಂದ ಬಂದ ಯಾತ್ರಾರ್ಥಿಗಳು ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸಿಪಿ, "ಯಾವುದೇ ಸ್ಫೋಟವಾಗಿಲ್ಲ. ದರ್ಬಾರ್ ಸಾಹಿಬ್ ಹೊರಭಾಗದ ಪಾರ್ಕಿಂಗ್ ಸ್ಥಳದಲ್ಲಿ ಬೃಹತ್ ಕನ್ನಡಿ ಇತ್ತು, ಅದು ಮುರಿದುಬಿದ್ದಿದೆ. ಪಾರ್ಕಿಂಗ್ ಪಕ್ಕದಲ್ಲಿ ರೆಸ್ಟೋರೆಂಟ್ ಇದೆ. ಅವರ ಚಿಮಣಿ ತುಂಬಾ ಬಿಸಿಯಾಗಿದ್ದರ ಪರಿಣಾಮ ಗಾಜು ಒಡೆದು ದೊಡ್ಡ ಸ್ಫೋಟ ಸಂಭವಿಸಿದೆ. ಬೇರೇನೂ ಇಲ್ಲ, ಭಯಪಡುವ ಅಗತ್ಯವಿಲ್ಲ" ಎಂದರು.
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಅಮೃತಸರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ವಾಹನದ ಕೆಳಗೆ ಬಾಂಬ್ ಇಡಲಾಗಿತ್ತು. ಅಮೃತಸರದ ರಂಜಿತ್ ಅವೆನ್ಯೂ ಪ್ರದೇಶದಲ್ಲಿರುವ ಸಬ್ ಇನ್ಸ್‌ಪೆಕ್ಟರ್ ದಿಲ್ಬಾಗ್ ಸಿಂಗ್ ಅವರ ನಿವಾಸದ ಬಳಿ ನಿಲ್ಲಿಸಿದ್ದ ವಾಹನದ ಕೆಳಗೆ ಬಾಂಬ್ ಮಾದರಿಯ ವಸ್ತು ಪತ್ತೆಯಾಗಿತ್ತು. ತನಿಖೆ ಕೈಗೊಂಡು ಸಿಸಿಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್‍ನಲ್ಲಿ ಬಂದು ಪೊಲೀಸ್ ಕಾರಿನ ಕೆಳಗೆ ಈ ಅನುಮಾನಾಸ್ಪದ ವಸ್ತುವನ್ನು ಇಟ್ಟು ಹೋಗಿರುವುದು ತಿಳಿದು ಬಂದಿತ್ತು.
ಇದನ್ನೂ ಓದಿ : ಜಮ್ಮುವಿನ ನರ್ವಾಲ್‌ನಲ್ಲಿ ನಿಗೂಢ ಸ್ಫೋಟ: ಜನರಲ್ಲಿ ಭಯದ ವಾತಾವರಣ
ಮೂಲಗಳ ಪ್ರಕಾರ, ದಿಲ್ಬಾಗ್ ಸಿಂಗ್ ಕುಟುಂಬದ ಸದಸ್ಯರೊಬ್ಬರು ಬೆಳಗ್ಗೆ ಕಾರನ್ನು ತೊಳೆಯಲು ಪ್ರಾರಂಭಿಸಿದಾಗ, ಸ್ಫೋಟಕ ವಸ್ತುವನ್ನು ನೋಡಿದ್ದು, ಕೂಡಲೇ ಸಬ್ ಇನ್ಸ್‌ಪೆಕ್ಟರ್ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ದಿಲ್ಬಾಗ್ ಸಿಂಗ್ ಹತ್ತಿರದ ರಂಜಿತ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದಾಗ ಕಿಡಿಗೇಡಿಗಳ ಕೃತ್ಯ ಬಯಲಾಗಿತ್ತು.
ಇದನ್ನೂ ಓದಿ : ವಿಡಿಯೋ ನೋಡುತ್ತಿದ್ದಾಗ ಮೊಬೈಲ್ ಸ್ಫೋಟ: ಬಾಲಕಿ ದಾರುಣ ಸಾವು
ಸಬ್ ಇನ್ಸ್‌ಪೆಕ್ಟರ್ ದಿಲ್ಬಾಗ್ ಸಿಂಗ್ ಮಾತನಾಡಿ, "ನನ್ನ ಕಾರಿನ ಕೆಳಗೆ ಬಾಂಬ್ ಇಡಲಾಗಿತ್ತು. ಕಾರ್ ಕ್ಲೀನರ್ ಈ ಬಗ್ಗೆ ನನಗೆ ಮಾಹಿತಿ ನೀಡಿದರು. ಮಧ್ಯರಾತ್ರಿ ಇಬ್ಬರು ವ್ಯಕ್ತಿಗಳು ನನ್ನ ಕಾರಿನ ಕೆಳಗೆ ಏನನ್ನೋ ಇಟ್ಟಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕುರಿತು ಎಫ್‍ಐಆರ್ ದಾಖಲಿಸಲಾಗಿದೆ" ಎಂದು ತಿಳಿಸಿದ್ದರು.
ಇದನ್ನೂ ಓದಿ : ಮನೆಯೊಳಗೆ ಕಚ್ಚಾ ಬಾಂಬ್ ಸ್ಫೋಟ : ಸ್ಥಳೀಯರಲ್ಲಿ ಆತಂಕ