ನಾಮಕ್ಕಲ್(ತಮಿಳುನಾಡು): ಪಟಾಕಿ ಅಂಗಡಿಯೊಬ್ಬರ ಮನೆಯಲ್ಲಿ ಸಂಭವಿಸಿದ ಪಟಾಕಿ ಸ್ಫೋಟದಿಂದಾಗಿ ನಾಲ್ವರು ಸಾವನ್ನಪ್ಪಿರುವ ಘಟನೆ ನಾಮಕ್ಕಲ್ನ ಮೊಗನೂರು ಮೆಟುತೇರು ಪ್ರದೇಶದಲ್ಲಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ 3 ಅಗ್ನಿಶಾಮಕ ದಳದಿಂದ ಬೆಂಕಿಯನ್ನು ನಂದಿಸಲಾಗಿದೆ. ಅವಶೇಷಗಳಡಿ ಸಿಲುಕಿದ್ದವರನ್ನು ಯಂತ್ರದ ಮೂಲಕ ರಕ್ಷಿಸಲಾಗಿದೆ.
ಸ್ಫೋಟ ಸಂಭವಿಸಿದ್ದು ಹೇಗೆ?: ಮೊಗನೂರು ಮೆಟುತೇರು ಪ್ರದೇಶದ ಪಟಾಕಿ ಅಂಗಡಿ ಮಾಲೀಕ ತಿಲ್ಲೈಕುಮಾರ್ ಎಂಬವರು ಹೊಸ ವರ್ಷಕ್ಕೆಂದು ಪಟಾಕಿಗಳನ್ನು ಖರೀದಿಸಿದ್ದರು. ಮಾರಾಟಕ್ಕೆಂದು ತಂದಿದ್ದ ಪಟಾಕಿಯನ್ನು ತಮ್ಮ ಮನೆಯಲ್ಲೇ ತಂದಿರಿಸಿದ್ದರು. ಅದು ಇಂದು ಮುಂಜಾನೆ ಸಿಡಿದಿದ್ದರಿಂದಾಗಿ ತಿಲ್ಲೈಕುಮಾರ್ ಅವರ ಮನೆ ಧ್ವಂಸಗೊಂಡಿದೆ. ಪರಿಣಾಮವಾಗಿ ತಿಲ್ಲೈಕುಮಾರ್, ಪತ್ನಿ ಪ್ರಿಯಾ, ತಾಯಿ ಸೆಲ್ವಿ ಮತ್ತು ಪಕ್ಕದ ಮನೆ ಮಹಿಳೆ ಸೇರಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.
ತಿಲ್ಲೈ ಕುಮಾರ್ ಅವರ 5 ವರ್ಷದ ಮಗಳು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಅಲ್ಲದೇ ಹತ್ತಿರವಿದ್ದ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂಬಂಧ ಮೊಗನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಒಂದೇ ಹಳಿ ಮೇಲೆ ಬಂದ ಎರಡು ರೈಲು: ಕೂದಲೆಳೆ ಅಂತರದಲ್ಲಿ ತಪ್ಪಿದ ಅಪಘಾತ