ಚಂಡೀಗಢ (ಹರಿಯಾಣ): ದೇಶದ ಗಮನ ಸೆಳೆದಿದ್ದ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಮತ್ತು ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್ ಕಂಪನಿಯಾದ ಡಿಎಲ್‌ಎಫ್ ಲಿಮಿಟೆಡ್ ನಡುವೆ ನಡೆದ ಭೂ ವ್ಯವಹಾರ ಮತ್ತೆ ಮುನ್ನೆಲೆಗೆ ಬಂದಿದೆ. ಐದು ವರ್ಷಗಳ ನಂತರ ಹರಿಯಾಣ ಸರ್ಕಾರವು ಈ ಭೂ ವ್ಯವಹಾರದಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಹೈಕೋರ್ಟ್‌ಗೆ ತಿಳಿಸಿದೆ.
ಏನಿದು ವಿವಾದ?: 2008ರ ಫೆಬ್ರವರಿಯಲ್ಲಿ ರಾಬರ್ಟ್ ವಾದ್ರಾ ಮತ್ತು ಡಿಎಲ್‌ಎಫ್ ನಡುವೆ ಭೂ ಒಪ್ಪಂದ ಆಗಿತ್ತು. ಇದು ವಾದ್ರಾ - ಡಿಎಲ್‌ಎಫ್ ಪ್ರಕರಣ ಎಂದೇ ಪ್ರಚಲಿತ. ರಾಬರ್ಟ್ ವಾದ್ರ ಅವರ ಸ್ಕೈಲೈಟ್ ಹಾಸ್ಪಿಟಾಲಿಟಿ ಕಂಪನಿಯು ಓಂಕಾರೇಶ್ವರ ಪ್ರಾಪರ್ಟೀಸ್‌ನಿಂದ ಗುರ್‌ಗಾಂವ್‌ನ ಮಾನೇಸರ್ - ಶಿಕೊಹ್‌ಪುರದಲ್ಲಿ ಸುಮಾರು 3.5 ಎಕರೆ ಭೂಮಿಯನ್ನು 7.5 ಕೋಟಿ ರೂ.ಗೆ ಖರೀದಿಸಿತ್ತು. ಮರುದಿನವೇ ಸ್ಕೈಲೈಟ್ ಹಾಸ್ಪಿಟಾಲಿಟಿ ಪರವಾಗಿ ಬದಲಾಣೆ ಮಾಡಲಾಗಿದೆ. ಅಂದರೆ, 24 ಗಂಟೆಗಳ ಒಳಗೆ ಭೂಮಿಯ ಮಾಲೀಕತ್ವವನ್ನು ರಾಬರ್ಟ್ ವಾದ್ರಾಗೆ ವರ್ಗಾಯಿಸಲಾಗಿತ್ತು.
ಈ ಭೂ ವ್ಯವಹಾರ ನಡೆದಾಗ ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಭೂಪೇಂದ್ರ ಸಿಂಗ್ ಹೂಡಾ ಮುಖ್ಯಮಂತ್ರಿಯಾಗಿದ್ದರು. ಭೂಮಿಯನ್ನು ಖರೀದಿಸಿದ ಸುಮಾರು ಒಂದು ತಿಂಗಳ ನಂತರ ಹೂಡಾ ಸರ್ಕಾರವು ವಾದ್ರಾ ಅವರ ಕಂಪನಿ ಸ್ಕೈಲೈಟ್ ಹಾಸ್ಪಿಟಾಲಿಟಿಗೆ ಈ ಭೂಮಿಯಲ್ಲಿ ವಸತಿ ಯೋಜನೆಯನ್ನು ಅಭಿವೃದ್ಧಿಪಡಿಸಲು ಅನುಮತಿ ನೀಡುತ್ತದೆ. ವಸತಿ ಯೋಜನೆಗೆ ಪರವಾನಗಿ ಪಡೆದ ನಂತರ ಭೂಮಿಯ ಬೆಲೆ ಹೆಚ್ಚಾಗುತ್ತದೆ.
ಪರವಾನಗಿ ಪಡೆದ ಎರಡು ತಿಂಗಳ ನಂತರ ಡಿಎಲ್‌ಎಫ್ 2008ರ ಜೂನ್ನಲ್ಲಿ ವಾದ್ರಾ ಅವರ ಕಂಪನಿ ಸ್ಕೈಲೈಟ್ ಹಾಸ್ಪಿಟಾಲಿಟಿಯಿಂದ 58 ಕೋಟಿಗೆ ಭೂಮಿಯನ್ನು ಖರೀದಿಸಲು ಒಪ್ಪಿಕೊಂಡಿತ್ತು. ಅಂದರೆ, ವಾದ್ರಾ ಅವರ ಕಂಪನಿಯು ಕೇವಲ ನಾಲ್ಕು ತಿಂಗಳಲ್ಲಿ ಶೇಕಡಾ 700ಕ್ಕಿಂತ ಹೆಚ್ಚು ಲಾಭವನ್ನು ಪಡೆಯುತ್ತದೆ. 2012ರಲ್ಲಿ ಹೂಡಾ ಸರ್ಕಾರವು ಕಾಲೋನಿ ನಿರ್ಮಿಸಲು ಪರವಾನಗಿಯನ್ನು ಡಿಎಲ್ಎಫ್ಗೆ ವರ್ಗಾಯಿಸಿದೆ.
ಅಶೋಕ್ ಖೇಮ್ಕಾ ಪ್ರವೇಶ: ಇದರ ನಡುವೆ 2012ರ ಅಕ್ಟೋಬರ್ನಲ್ಲಿ ಭೂ ದಾಖಲೆಗಳ ನೋಂದಣಿ ಇಲಾಖೆಯ ಮಹಾನಿರ್ದೇಶಕರಾಗಿ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಪ್ರವೇಶವಾಗುತ್ತದೆ. ಆಗ ಶಿಕೋಪುರ ಗ್ರಾಮದ 3.531 ಎಕರೆ ಜಾಗವನ್ನು ಡಿಎಲ್‌ಎಫ್ ಯೂನಿವರ್ಸಲ್‌ಗೆ 58 ಕೋಟಿ ರೂ.ಗೆ ಮಾರಾಟ ಮಾಡಿದ್ದನ್ನು ರದ್ದುಗೊಳಿಸುತ್ತಾರೆ.
ಇದರ ನಂತರ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಅವರ ಆದೇಶದ ಮೇರೆಗೆ 11 ಅಕ್ಟೋಬರ್ 2012ರಂದು ಖೇಮ್ಕಾ ಅವರನ್ನು ವರ್ಗಾಯಿಸಲಾಯಿತು. ಇದು ರಾಜಕೀಯ ವಿವಾದಕ್ಕೂ ಕಾರಣವಾಗಿತ್ತು. ರಾಷ್ಟ್ರ ಮಟ್ಟದಲ್ಲೂ ಗಮನ ಸೆಳೆದಿತ್ತು. ಆಗ ವಾದ್ರಾ ವಿರುದ್ಧ ಬಿಜೆಪಿ ಮುಗಿಬಿತ್ತು. ರಾಬರ್ಟ್ ವಾದ್ರಾ ವಿರುದ್ಧ ತೀವ್ರ ನಡೆಸಿತು. ವಾದ್ರಾ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ವಹಿವಾಟು ನಡೆದಿದೆ ಎಂದೂ ಬಿಜೆಪಿ ಆರೋಪಿಸಿತ್ತು.
ಈ ಒಪ್ಪಂದವು ಭ್ರಷ್ಟಾಚಾರ ಮತ್ತು 'ಕ್ರೋನಿ ಕ್ಯಾಪಿಟಲಿಸಂ'ಗೆ ಉದಾಹರಣೆಯಾಗಿದೆ ಎಂದು ಬಿಜೆಪಿ ಟೀಕೆ ಮಾಡಿತ್ತು. ಮತ್ತೊಂದೆಡೆ, 2014ರಲ್ಲಿ ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ಇತ್ತು. ಇದು ಸಾಕಷ್ಟು ರಾಜಕೀಯಕ್ಕೂ ಕಾರಣವಾಗಿತ್ತು. ಕೊನೆಗೆ ಚುನಾವಣೆಯಲ್ಲಿ ಇದೇ ವಿಷಯವು ಕಾಂಗ್ರೆಸ್ಗೆ ಕಂಟಕವಾಯಿತು. ಬಿಜೆಪಿಗೆ ಸಂಜೀವಿನಿಯಾಗಿ ಪರಿವರ್ತನೆಗೊಂಡು ಅಧಿಕಾರಕ್ಕೆ ಬರಲು ಸಾಧ್ಯವಾಯಿತು. 2019ರ ಲೋಕಸಭೆ ಚುನಾವಣೆಗೆ ಮುನ್ನ ಕೂಡ ಪ್ರಧಾನಿ ಮೋದಿ ವಾದ್ರಾ ಅವರನ್ನು 'ಅಳಿಯ ಶ್ರೀ' ಎಂದು ಕರೆಯುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಹೈಕೋರ್ಟ್‌ಗೆ ಸರ್ಕಾರದ ಅಫಿಡವಿಟ್: ಇದೇ ಪ್ರಕರಣದಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ರಾಬರ್ಟ್ ವಾದ್ರಾ ಸೇರಿದಂತೆ ಹಲವರ ವಿರುದ್ಧ 2018ರಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಐದು ವರ್ಷಗಳ ಈ ಪ್ರಕರಣದ ಬಗ್ಗೆ ಪಂಜಾಬ್ - ಹರಿಯಾಣ ಹೈಕೋರ್ಟ್‌ಗೆ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. 2019ರ ಸೆಪ್ಟೆಂಬರ್ 18ರಂದು ಸ್ಕೈಲೈಟ್ ಹಾಸ್ಪಿಟಾಲಿಟಿ 3.5 ಎಕರೆಯನ್ನು ಡಿಎಲ್‌ಎಫ್ ಯೂನಿವರ್ಸಲ್ ಲಿಮಿಟೆಡ್‌ಗೆ ಮಾರಾಟ ಮಾಡಿದೆ ಎಂದು ಮಾನೇಸರ್ ತಹಸೀಲ್ದಾರ್ ವರದಿ ಮಾಡಿದ್ದಾರೆ. ಈ ವ್ಯವಹಾರದಲ್ಲಿ ಯಾವುದೇ ನಿಯಮಗಳನ್ನು ಉಲ್ಲಂಘಿಸಲಾಗಿಲ್ಲ ಎಂದು ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಿದೆ. ಈ ಮೂಲಕ ಬಿಜೆಪಿ ಸರ್ಕಾರ ವಾದ್ರಾಗೆ ಒಂದು ರೀತಿಯಲ್ಲಿ ಕ್ಲೀನ್ ಚಿಟ್ ನೀಡಿದೆ.
ಇದನ್ನೂ ಓದಿ: ರಾಜಕೀಯಕ್ಕೆ ಎಂಟ್ರಿ ಬಗ್ಗೆ ಸುಳಿವು ನೀಡಿದ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ!