ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮಹತ್ವದ ಯೋಜನೆಯಾದ ಸೂರ್ಯನ ಅಧ್ಯಯನಕ್ಕೆ ಮುಂದಾಗಿದೆ. ನಾಳೆ, ಶನಿವಾರ ಆದಿತ್ಯ-ಎಲ್1 ಗಗನನೌಕೆಯು ಸೂರ್ಯನ ಸಮಗ್ರ ಅಧ್ಯಯನಕ್ಕಾಗಿ ಉಡಾವಣೆಗೊಳ್ಳಲಿದೆ. ಈ ಬಾಹ್ಯಾಕಾಶ ನೌಕೆ ಹೊತ್ತು ಸಾಗುವ 7 ಪೇಲೋಡ್ಗಳ ಕೆಲಸಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
1. ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (Visible Emission Line Coronagraph - VELC): ಆದಿತ್ಯ-ಎಲ್1ರ ಪ್ರಧಾನ ಪೇಲೋಡ್. ಇದನ್ನು ಬಹು-ಸ್ಲಿಟ್ ಸ್ಪೆಕ್ಟ್ರೋಗ್ರಾಫ್‌ನೊಂದಿಗೆ ಪ್ರತಿಫಲಿತ ಕರೋನಾಗ್ರಾಫ್‌ನಂತೆ ವಿನ್ಯಾಸಗೊಳಿಸಲಾಗಿದೆ. ಇಸ್ರೋದ ನಿಕಟ ಸಹಯೋಗದೊಂದಿಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಅಭಿವೃದ್ಧಿಪಡಿಸಿದೆ. ಈ ಪೇಲೋಡ್ ಸೂರ್ಯನ ಕರೋನಾ ಎಂದರೆ ಸೂರ್ಯನ ವಾತಾವರಣದ ಹೊರಭಾಗ ಹಾಗೂ ಕರೋನಲ್ ಹೊರಭಾಗ ಹೊರಸೂಸುವ ದ್ರವ್ಯರಾಶಿಯ ಚಲನೆಯನ್ನು ಅಧ್ಯಯನ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ.
2. ಸೋಲಾರ್ ಅಲ್ಟ್ರಾ-ವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ (Solar Ultra-violet Imaging Telescope - SUIT): ಇದು ನೇರಳಾತೀತ (Ultra-violet) ದೂರದರ್ಶಕವಾಗಿದ್ದು, ನೇರಳಾತೀತ ತರಂಗಾಂತರದ ವ್ಯಾಪ್ತಿಯಲ್ಲಿರುವ ಸೂರ್ಯನ ವೃತ್ತಾಕಾರವಾಗಿ ಗೋಚರಿಸುವ ಮೇಲ್ಮೈಯನ್ನು (ಸೋಲಾರ್ ಡಿಸ್ಕ್) ಚಿತ್ರಿಸಲಿದೆ. ಈ ಪೇಲೋಡ್ ಅನ್ನು ಪುಣೆಯ ಇಂಟರ್‌ಯೂನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರೋನಮಿ ಆ್ಯಂಡ್ ಆಸ್ಟ್ರೋಫಿಸಿಕ್ಸ್ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸೂರ್ಯನ ಗೋಚರ ಮೇಲ್ಮೈ (ದ್ಯುತಿಗೋಳ) ಮತ್ತು ಸೂರ್ಯನ ಮೇಲಿನ ವಾತಾವರಣದ ನಡುವಿನ ಬೆಳಕಿನ ಗೋಳ (ಫೋಟೋಸ್ಪಿಯರ್) ಮತ್ತು ಪ್ಲಾಸ್ಮಾದ ತೆಳುವಾದ ಪದರವನ್ನು (ಕ್ರೋಮೋಸ್ಪಿಯರ್) ಚಿತ್ರಿಸುತ್ತದೆ. ಇದರ ಜೊತೆಗೆ ಸೌರ ವಿಕಿರಣ ವ್ಯತ್ಯಾಸಗಳನ್ನು ಅಳೆಯುತ್ತದೆ.
3. ಸೋಲಾರ್ ಲೋ ಎನರ್ಜಿ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (Solar Low Energy X-ray Spectrometer - SoLEXS): ಆದಿತ್ಯ-ಎಲ್1 ಉಪಗ್ರಹದಲ್ಲಿರುವ ಮೃದುವಾದ ಎಕ್ಸ್-ರೇ ಸ್ಪೆಕ್ಟ್ರೋಮೀಟರ್. ಸೌರ ಜ್ವಾಲೆಗಳನ್ನು ಅಧ್ಯಯನ ಮಾಡಲು ಈ ಪೇಲೋಡ್ ಅನ್ನು ವಿನ್ಯಾಸಗೊಳಿಸಲಾಗಿದೆ.
4. ಹೈ ಎನರ್ಜಿ ಎಲ್1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (High Energy L1 Orbiting X-ray Spectrometer- HEL1OS): ಇದು ಒಂದು ದೃಢವಾದ ಎಕ್ಸ್-ರೇ ಸ್ಪೆಕ್ಟ್ರೋಮೀಟರ್. ಹೆಚ್ಚಿನ ಶಕ್ತಿಯ ಎಕ್ಸ್-ಕಿರಣಗಳಲ್ಲಿ ಸೌರ ಜ್ವಾಲೆಗಳನ್ನು ಅಧ್ಯಯನಕ್ಕೆ ವಿನ್ಯಾಸ ಮಾಡಲಾಗಿದೆ. ಎಸ್ಒಎಲ್ಇಎಕ್ಸ್ಎಸ್ ಮತ್ತು ಹೆಚ್ಇಎಲ್1ಒಎಸ್ ಎರಡೂ ಪೇಲೋಡ್‌ಗಳನ್ನು ಬೆಂಗಳೂರಿನ ಯು.ಆರ್.ರಾವ್ ಉಪಗ್ರಹ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ.
5. ಆದಿತ್ಯ ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪರಿಮೆಂಟ್ (Aditya Solar wind Particle EXperiment - ASPEX): ಈ ಪೇಲೋಡ್ ಎರಡು ಉಪವ್ಯವಸ್ಥೆ ಹೊಂದಿದೆ. ಮೊದಲನೆಯದು ಸೋಲಾರ್ ವಿಂಡ್ ಐಯಾನ್ ಸ್ಪೆಕ್ಟ್ರೋಮೀಟರ್ (Solar Wind Ion Spectrometer-SWIS). ಇದೊಂದು ಕಡಿಮೆ ಶಕ್ತಿಯ ಸ್ಪೆಕ್ಟ್ರೋಮೀಟರ್ ಆಗಿದ್ದು, ಸೌರ ಗಾಳಿಯ ಪ್ರೋಟಾನ್ ಮತ್ತು ಆಲ್ಫಾ ಕಣಗಳನ್ನು ಅಳೆಯಲು ವಿನ್ಯಾಸಗೊಳಿಸಲಾಗಿದೆ. ಎರಡನೆಯದು, ಸೂಪರ್ ಥರ್ಮಲ್ ಮತ್ತು ಎನರ್ಜಿಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್ (Suprathermal and Energetic Particle Spectrometer - STEPS). ಸೌರ ಮಾರುತದ ಹೆಚ್ಚಿನ ಶಕ್ತಿಯ ಅಯಾನುಗಳನ್ನು ಅಳೆಯಲು ವಿನ್ಯಾಸಗೊಳಿಸಲಾಗಿದೆ. ಅಹಮದಾಬಾದ್‌ನ ಭೌತಿಕ ಸಂಶೋಧನಾ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗಿದೆ.
6. ಆದಿತ್ಯಗಾಗಿ ಪ್ಲಾಸ್ಮಾ ವಿಶ್ಲೇಷಕ ಪ್ಯಾಕೇಜ್ (Plasma Analyser Package for Aditya - PAPA): ಸೌರ ಗಾಳಿ ಮತ್ತು ಅದರ ಸಂಯೋಜನೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಸೌರ ಗಾಳಿಯ ಅಯಾನುಗಳ ಸಾಮೂಹಿಕ ವಿಶ್ಲೇಷಣೆಯನ್ನು ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಪೇಲೋಡ್ ಅನ್ನು ತಿರುವನಂತಪುರಂದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗಿದೆ.
7. ಮ್ಯಾಗ್ನೆಟೋಮೀಟರ್ (Magnetometer - MAG): ಇದು ಬಾಹ್ಯಾಕಾಶದಲ್ಲಿನ ಕಡಿಮೆ ತೀವ್ರತೆಯ ಅಂತರಗ್ರಹ ಕಾಂತೀಯ ಕ್ಷೇತ್ರವನ್ನು ಅಳೆಯಲಿದೆ. ಇದು ಎರಡು ಸೆಟ್ ಮ್ಯಾಗ್ನೆಟಿಕ್ ಸೆನ್ಸಾರ್‌ಗಳನ್ನು ಹೊಂದಿದೆ. ಒಂದು ಬಾಹ್ಯಾಕಾಶ ನೌಕೆಯಿಂದ 6 ಮೀಟರ್ ದೂರದಲ್ಲಿ ನಿಯೋಜಿಸಬಹುದಾದ ಬೂಮ್‌ನ ತುದಿ ಮತ್ತು ಇನ್ನೊಂದು 3 ಮೀಟರ್ ದೂರದಲ್ಲಿ ಬೂಮ್‌ನ ಮಧ್ಯದಲ್ಲಿದೆ. ಇದನನ್ಉ ಬೆಂಗಳೂರಿನ ಎಲೆಕ್ಟ್ರೋ ಆಪ್ಟಿಕ್ಸ್ ಸಿಸ್ಟಮ್ಸ್ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಇದನ್ನೂ ಓದಿ: ನಾಳೆ 'ಆದಿತ್ಯ-ಎಲ್1' ಉಡ್ಡಯನ: ಇಸ್ರೋ ತಿಳಿಸಿದ 3 ಸಂಗತಿಗಳಿವು..