ಹೈದರಾಬಾದ್: ಐಷಾರಾಮಿ ಜೀವನ ಸಾಗಿಸಲು ಅಡ್ಡದಾರಿ ಹಿಡಿದಿದ್ದ ಯುವ ಕ್ರಿಕೆಟರ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ತಾನು ಐಪಿಎಸ್ ಅಧಿಕಾರಿ, ಐಪಿಎಲ್ ಕ್ರಿಕೆಟರ್ ಎಂದೆಲ್ಲ ಹೇಳಿಕೊಂಡು ಮೋಸ ಮಾಡುತ್ತಿದ್ದ ಈ ವಂಚಕ ದೇಶ ಬಿಟ್ಟು ಪರಾರಿಯಾಗುತ್ತಿದ್ದಾಗ ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. 25 ವರ್ಷದ ಮೃಣಾಂಕ್ ಸಿಂಗ್ ಎಂಬಾತನೇ ಈ ಮೋಸಗಾರ.
ಹರಿಯಾಣದ ಫರಿದಾಬಾದ್ ಮೂಲದ ಮೃಣಾಂಕ್ ಸಿಂಗ್, ಈ ಹಿಂದೆ ರಾಜ್ಯದ 19 ವರ್ಷದೊಳಗಿನವರ ಕ್ರಿಕೆಟ್ ತಂಡದ ಸದಸ್ಯನಾಗಿದ್ದ. ಆದರೆ, ಕ್ರಿಕೆಟ್ ಬಿಟ್ಟು ಐಷಾರಾಮಿ ಜೀವನಶೈಲಿಗಾಗಿ ಅಡ್ಡದಾರಿ ಹಿಡಿದಿದ್ದ. ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಅವರಂತಹ ಪ್ರಮುಖರನ್ನೂ ತನ್ನ ವಂಚನೆಯ ಬಲೆಗೆ ಹಾಕಿಕೊಂಡಿದ್ದ. ಅಲ್ಲದೇ, ಕರ್ನಾಟಕದ ಎಡಿಜಿಪಿ ಅಧಿಕಾರಿ ಎಂದು ಹೇಳಿಕೊಂಡು ಹಲವು ಐಷಾರಾಮಿ ಹೊಟೇಲ್ ಮತ್ತು ರೆಸಾರ್ಟ್ಗಳಿಗೂ ವಂಚಿಸಿರುವುದು ಬೆಳಕಿಗೆ ಬಂದಿದೆ.
ಮಹಿಳೆಯರು, ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳಿಗೂ ವಂಚನೆ: ಮೃಣಾಂಕ್ ಸಿಂಗ್ ಒಮ್ಮೆ ಐಪಿಎಸ್ ಅಧಿಕಾರಿಯಂತೆ ಸೋಗು ಹಾಕಿಕೊಳ್ಳುತ್ತಿದ್ದ. ಮತ್ತೊಮ್ಮೆ ಐಪಿಎಲ್ ಕ್ರಿಕೆಟಿಗನಂತೆ ನಟಿಸಿ ಜನರನ್ನು ವಂಚಿಸುತ್ತಿದ್ದ. ಐಷಾರಾಮಿ ಹೋಟೆಲ್ಗಳಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ ಬಿಲ್ ಪಾವತಿಸದೆ ಪರಾರಿಯಾಗುತ್ತಿದ್ದ. 2014-18ರ ಅವಧಿಯಲ್ಲಿ ಐಪಿಎಲ್ ತಂಡವೊಂದರ ಸದಸ್ಯ ಎಂದು ಹೇಳಿಕೊಂಡೇ ಹಲವು ಮಹಿಳೆಯರು ಮತ್ತು ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳಿಗೂ ವಂಚಿಸಿದ್ದು ಬಯಲಾಗಿದೆ.
2022ರಲ್ಲಿ ದೆಹಲಿಯ ಪ್ರಸಿದ್ಧ ಪಂಚತಾರಾ ಹೋಟೆಲ್‌ನಲ್ಲಿ ಒಂದು ವಾರ ಕಾಲ ತಂಗಿದ್ದ. ಆಗ ತಾನು ಜನಪ್ರಿಯ ಕ್ರಿಕೆಟಿಗ ಎಂದು ಎಲ್ಲರಿಗೂ ಪರಿಚಯಿಸಿಕೊಂಡಿದ್ದಾನೆ. ಅಲ್ಲದೇ, 5.53 ಲಕ್ಷ ರೂ ಬಿಲ್ ಮಾಡಿ ಇದನ್ನೂ, ತನ್ನ ಪ್ರಾಯೋಜಕ ಕಂಪನಿ ಪಾವತಿಸುತ್ತದೆ ಎಂದು ಅಲ್ಲಿಂದ ಪರಾರಿಯಾಗಿದ್ದ. ಆತನ ಮಾತು ನಂಬಿದ ಹೋಟೆಲ್ ಸಿಬ್ಬಂದಿ ತಮ್ಮ ಬ್ಯಾಂಕ್ ವಿವರಗಳನ್ನು ಹಂಚಿಕೊಂಡಿದ್ದಾರೆ. ಆ ಬಳಿಕ 2 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ ನಕಲಿ ವಹಿವಾಟಿನ ವಿವರ ಕಳುಹಿಸಿದ್ದ. ಇದಾದ ನಂತರ ತಾವು ಮೋಸ ಹೋಗಿರುವುದನ್ನು ಅರಿತ ಹೋಟೆಲ್ ಆಡಳಿತ ಮಂಡಳಿಯು ಪೊಲೀಸರಿಗೆ ದೂರು ನೀಡಿತ್ತು.
ಅಂತೆಯೇ, ದೆಹಲಿ ಪೊಲೀಸರು ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಜಾಮೀನುರಹಿತ ವಾರೆಂಟ್ ಜಾರಿ ಮಾಡಿ ಲುಕ್ ಔಟ್ ಸುತ್ತೋಲೆ ಕೂಡ ಹೊರಡಿಸಲಾಗಿತ್ತು. ಇದರ ನಡುವೆ ಡಿಸೆಂಬರ್ 25ರಂದು ಹಾಂಕಾಂಗ್‌ಗೆ ಹೋಗಲು ಮೋಸಗಾರ ಮೃಣಾಂಕ್ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಆಗ ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆಗಲೂ, ಈ ಖದೀಮ ತಾನು ಹಿರಿಯ ಐಪಿಎಸ್ ಅಧಿಕಾರಿ ಎಂದು ಬಿಂಬಿಸಿಕೊಳ್ಳಲು ಯತ್ನಿಸಿದ್ದ. ಆದರೆ, ಕಳ್ಳಾಟ ಅರಿತ ಇಮಿಗ್ರೇಷನ್ ಅಧಿಕಾರಿಗಳು ದೆಹಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ರಿಷಭ್ ಪಂತ್ಗೂ ಮೋಸ: ಇದೀಗ ತನಿಖೆಯ ವೇಳೆ ಆರೋಪಿಯ ವರ್ತನೆ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ ಇನ್ನಷ್ಟು ವಂಚನೆಗಳು ಬೆಳಕಿಗೆ ಬಂದಿವೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರಿಗೂ ಮೋಸ ಮಾಡಿದ್ದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಈ ಹಿಂದೆ ಐಷಾರಾಮಿ ಉತ್ಪನ್ನಗಳ ವ್ಯವಹಾರ ಮತ್ತು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿ ಪಂತ್ ಅವರಿಗೆ ಆಮಿಷವೊಡ್ಡಿದ್ದ. 2020ರಿಂದ 21ರ ನಡುವೆ ಪಂತ್ ಅವರಿಂದ 1.63 ಕೋಟಿ ರೂ. ಪಡೆದಿದ್ದ. ಇದರಿಂದಾಗಿ ಕಳೆದ ವರ್ಷ ಪಂತ್ ಈ ಬಗ್ಗೆ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಸ್ನೇಹಿತನನ್ನು ನಂಬಿ ಹೋದ ಅಸ್ಸೋಂ ಮಹಿಳಾ ಬಾಕ್ಸರ್ ವಿದೇಶದಲ್ಲಿ ಒತ್ತೆಯಾಳು: ಬಿಡಿಸಿಕೊಡಲು ಕುಟುಂಬದ ಮನವಿ