ಪ್ರಯಾಗ್ರಾಜ್ (ಉ.ಪ್ರ): ಅಲಹಾಬಾದ್ನ ಸಂಗಮ್ನಲ್ಲಿ 45 ಕಿ.ಮೀಟರ್ನಷ್ಟು ಉದ್ದದ ಪ್ರದೇಶದಲ್ಲಿ ಸರಸ್ವತಿ ನದಿ ಹರಿವಿಕೆಯ ಕುರುಹು ಇದೀಗ ಸಾಧು ಸಂತರು, ನಿವಾಸಿಗಳ ಕುತೂಹಲಕ್ಕೆ ಕಾರಣವಾಗಿದೆ. ಸುಮಾರು 12,000 ವರ್ಷಗಳ ಹಿಂದೆ ಇಲ್ಲಿ ಸರಸ್ವತಿ ನದಿ ಹರಿಯುತ್ತಿತ್ತು ಎಂದು ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ (NGRI) ವಿಜ್ಞಾನಿಗಳು ನಡೆಸಿರುವ ಸರ್ವೆಯಲ್ಲಿ ಬಯಲಾಗಿದೆ. ವಿದ್ಯುತ್ಕಾಂತೀಯ ಸಮೀಕ್ಷೆಯಲ್ಲಿ ಇದು 12,000 ವರ್ಷ ಹಳೆಯದಾದ ಪವಿತ್ರ ನದಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಋಗ್ವೇದದಲ್ಲಿ ಉಲ್ಲೇಖಿಸಲಾಗಿರುವ ವಿವರಣೆಯೂ ಈ ನದಿಯ ಕುರಿತಾಗಿದೆ. ಸಂಗಮ್ ಸ್ಥಳದಲ್ಲಿ ಹರಿಯುವ ಸರಸ್ವತಿ ನದಿಯು 45 ಕಿ.ಮೀ ಉದ್ದವಿದ್ದು, ನಾಲ್ಕು ಕಿಲೋಮೀಟರ್ ಅಗಲ ಮತ್ತು 15 ಮೀಟರ್ ಆಳವನ್ನು ಹೊಂದಿದೆ. ಸಂಗಮ ಸ್ಥಳವು ಗಂಗಾ, ಯಮುನಾ ಮತ್ತು ಸರಸ್ವತಿ ಎಂಬ ಮೂರು ಮಹಾನದಿಗಳ ಕೂಡುವಿಕೆಯ ಸ್ಥಳವಾಗಿದೆ. ಆದರೆ, ಸರಸ್ವತಿ ನದಿ ಸಾವಿರಾರು ವರ್ಷಗಳ ಹಿಂದೆಯೇ ಬತ್ತಿಹೋಗಿ ಕೇವಲ ಕುರುಹುಗಳ ಮೂಲಕ ತನ್ನ ಇರುವಿಕೆಗೆ ಸಾಕ್ಷಿಯಾಗಿದೆ.
ಈ ನದಿಯು 2,700 ದಶಲಕ್ಷ ಘನ ಮೀಟರ್ (MCM) ಮರಳು ನಿಕ್ಷೇಪಗಳನ್ನು ಮತ್ತು 1,000 MCM ನೀರನ್ನು ಹಿಡಿದಿಟ್ಟುಕೊಂಡಿದೆ, ಇದು 1,300 ಚದರ ಅಡಿಯಿಂದ 2,000 ಚದರ ಅಡಿವರೆಗೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ಸಾಮರ್ಥ್ಯ ಹೊಂದಿದೆ ಎಂಬ ಅಂಶ ಇದೀಗ ಬಯಲಾಗಿದೆ. ಇದಲ್ಲದೇ, ನದಿಯು ಗಂಗಾ ಮತ್ತು ಯಮುನಾ ನದಿಗಳ ನೀರಿನ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಎಂದು ವಿವರಿಸಲಾಗಿದೆ.
ಈ ಹಿಂದೆ 2016ರಲ್ಲಿ, ಪೌರಾಣಿಕ ಸರಸ್ವತಿ ನದಿಯ ಅಧ್ಯಯನವನ್ನು ಕೈಗೊಳ್ಳಲು ಕೇಂದ್ರ ಜಲಸಂಪನ್ಮೂಲ ಸಚಿವಾಲಯವು 7 ಸದಸ್ಯರ ತಂಡವನ್ನು ರಚಿಸಿತ್ತು. ಸಮಿತಿಯು ತನ್ನ ಸಂಶೋಧನೆಗಳಲ್ಲಿ ಪ್ರಾಚೀನ ನದಿಯ ಅಸ್ತಿತ್ವದ ಸುಳಿವು ನೀಡಿತ್ತು. ಅದರ ನಂತರ, ಸಿಎಸ್ಐಆರ್ ಮತ್ತು ಎನ್ಜಿಆರ್ಐ ಸಂಶೋಧಕರ ಜಂಟಿ ತಂಡವು ಪ್ರಯಾಗ್‌ರಾಜ್‌ನಿಂದ ಕೌಶಾಂಬಿಯವರೆಗೆ ಸಮೀಕ್ಷೆ ನಡೆಸಿತ್ತು.
ಇದನ್ನೂ ಓದಿ: ಹಕ್ಕಿ ಜ್ವರ ಭೀತಿ: ಕೇರಳದಲ್ಲಿ ಸಾವಿರಾರು ಬಾತುಕೋಳಿಗಳ ಮಾರಣ ಹೋಮಕ್ಕೆ ರೈತರು ಕಂಗಾಲು