ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ವೈಯಕ್ತಿಕ ಚಂದಾದಾರರ ಸಾರ್ವತ್ರಿಕ ಖಾತೆ ಸಂಖ್ಯೆ (UAN) ನೊಂದಿಗೆ ಕಡ್ಡಾಯ ಆಧಾರ್ ಜೋಡಣೆಯ ಗಡುವನ್ನು ಜೂನ್ 1 ರಿಂದ ಸೆಪ್ಟೆಂಬರ್ 1, 2021 ರವರೆಗೆ ವಿಸ್ತರಿಸಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಉದ್ಯೋಗದಾತರಿಗೆ 2021 ರ ಸೆಪ್ಟೆಂಬರ್ 1 ರವರೆಗೆ ಸಮಯ ನೀಡಲಾಗಿದೆ.
ತನ್ನ ಹಿಂದಿನ ಅಧಿಸೂಚನೆಯಲ್ಲಿ ಇಪಿಎಫ್ಒ ಕ್ಷೇತ್ರ ಸಿಬ್ಬಂದಿಗೆ ಜೂನ್ 1ರೊಳಗೆ ಸಾರ್ವತ್ರಿಕ ಖಾತೆ ಸಂಖ್ಯೆ (UAN) ನೊಂದಿಗೆ ಕಡ್ಡಾಯ ಆಧಾರ್ ಜೋಡಣೆಯ ಗಡುವನ್ನು ನೀಡಿತ್ತು. ಆದರೆ ಕೊರೊನಾ ಸಮಯದಲ್ಲಿ ಇಪಿಎಫ್ ಚಂದಾದಾರರು ಎದುರಿಸುತ್ತಿರುವ ಅನಾನುಕೂಲತೆಯ ಬಗ್ಗೆ ಕೇಂದ್ರಕ್ಕೆ ಅನೇಕ ಮನವಿಗಳು ಬಂದ ಬಳಿಕ ಈ ವಿಸ್ತರಣೆ ಆದೇಶ ಬಂದಿದೆ.
ಅಧಿಸೂಚನೆಯು 2020ರಲ್ಲಿ ಸಾಮಾಜಿಕ ಭದ್ರತಾ ಸಂಹಿತೆ ಅಡಿಯಲ್ಲಿ ಫಲಾನುಭವಿಗಳಿಂದ ಆಧಾರ್ ಸಂಖ್ಯೆಯನ್ನು ಪಡೆಯಲು ಸಚಿವಾಲಯ ಮತ್ತು ಅದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳನ್ನು ಕಡ್ಡಾಯಗೊಳಿಸಿದೆ. ಈ ಸಂಹಿತೆಯನ್ನು ಕಳೆದ ವರ್ಷ ಸಂಸತ್ತು ಅಂಗೀಕರಿಸಿತು.
ಇನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) ಪಿಎಫ್ ಖಾತೆ ನಿಯಮಗಳಲ್ಲಿ ಬದಲಾವಣೆಗಳನ್ನು ಪರಿಚಯಿಸಿದೆ. ಎಲ್ಲ ಇಪಿಎಫ್‌ಒ ಖಾತೆಗಳ ಆಧಾರವನ್ನು ಸರಿಯಾಗಿ ಲಿಂಕ್ ಮಾಡಬೇಕು ಎಂದು ಸಂಸ್ಥೆಗಳಿಗೆ ಮಾಹಿತಿ ಕಳುಹಿಸಿದೆ. ಆಧಾರ್‌ಗೆ ಸಂಪರ್ಕವಿಲ್ಲದ ಖಾತೆಗಳಿಗೆ ಇಸಿಆರ್ ಸಲ್ಲಿಸಲಾಗದ ಕಾರಣ ಕೊಡುಗೆಯನ್ನು ನಿಲ್ಲಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಆದ್ದರಿಂದ ಆಧಾರ್ ಅನ್ನು ಸರಿಯಾಗಿ ಸಂಪರ್ಕಿಸುವಂತೆ ಕೋರಲಾಗಿದೆ.
ಆಧಾರ್ ಪರಿಶೀಲನೆಯನ್ನು ಪೂರ್ಣಗೊಳಿಸಿದ ಎಲ್ಲಾ ಇಪಿಎಫ್ ಖಾತೆಗಳಿಗೆ ಯುಎಎನ್ ಪಡೆಯಲು ಇಪಿಎಫ್‌ಒ ಮಾಲೀಕರಿಗೆ ನಿರ್ದೇಶನ ನೀಡಿದೆ. ಆದ್ದರಿಂದ ಇಪಿಎಫ್ ಗ್ರಾಹಕರು, ಇಪಿಎಫ್‌ಒ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಸಂಸ್ಥೆಗಳು ಆಧಾರ್ ಅನ್ನು ಲಿಂಕ್ ಮಾಡಲು ಅಗತ್ಯವಾದ ದಾಖಲೆಗಳನ್ನು ಒದಗಿಸಬೇಕು.
ಇಪಿಎಫ್‌ಒ ಚಂದಾದಾರರು ಆನ್‌ಲೈನ್‌ನಲ್ಲಿ ಇಪಿಎಫ್ ಖಾತೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಬಹುದು. ಈಗ ಆ ವಿಧಾನವನ್ನು ನೋಡೋಣ.
1. ಇಪಿಎಫ್‌ಒ ಪೋರ್ಟಲ್ ತೆರೆಯಿರಿ ಮತ್ತು ಎಡಭಾಗದಲ್ಲಿರುವ ಇಕೆವೈಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
2. ಯುಎನ್, ನೋಂದಾಯಿತ ಮೊಬೈಲ್ ಸಂಖ್ಯೆಗಳನ್ನು ಇಲ್ಲಿ ನಮೂದಿಸಿ.
3. ಜನರೇಟ್ 'ಒಟಿಪಿ' ಆಯ್ಕೆಯನ್ನು ಕ್ಲಿಕ್ ಮಾಡಿ.
4. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಬಂದ 'ಒಟಿಪಿ' ಅನ್ನು ನಮೂದಿಸಿ.
5. ಇಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು 'ಆಧಾರ್ ಪರಿಶೀಲನೆ' ವಿಧಾನ ಆಯ್ಕೆ ಮಾಡಿ.
6. ಪ್ರಸ್ತುತ ಬಳಕೆಯಲ್ಲಿರುವ 'ಮೊಬೈಲ್ ಅಥವಾ ಇ-ಮೇಲ್' ಮೂಲಕ ಪರಿಶೀಲನೆಯನ್ನು ಪೂರ್ಣಗೊಳಿಸಬಹುದು.
7. ಮತ್ತೊಮ್ಮೆ ‘ಒಟಿಪಿ’ ಪರಿಶೀಲನೆಗಾಗಿ ಬರುತ್ತದೆ.
8. 'ಒಟಿಪಿ' ನಮೂದಿಸಿ ಮತ್ತು ಸಲ್ಲಿಸಿ.
9. ಇದು ಇಪಿಎಫ್, ಯುಎಎನ್ ಆಧಾರಿತ ಸಂಪರ್ಕ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ.