ಆಂಧ್ರಪ್ರದೇಶ: ಇಲ್ಲಿನ ಎಲೂರಿನಲ್ಲಿ ನಿಗೂಢ ಕಾಯಿಲೆಯಿಂದ ಅನಾರೋಗ್ಯಕ್ಕೆ ಒಳಗಾಗಿರುವ ಜನರ ಸಂಖ್ಯೆ 505ಕ್ಕೆ ಏರಿಕೆಯಾಗಿದೆ.
ಇಲ್ಲಿನ ಜನರು ವರ್ಟಿಗೊ, ಫಿಟ್ಸ್, ಉಸಿರಾಟದ ತೊಂದರೆ ಮತ್ತು ತಲೆತಿರುಗುವುದು ಸೇರಿದಂತೆ ಮೂರ್ಛೆ ಹೋಗುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ನಿಜವಾದ ಕಾರಣವೇನು? ಎಂಬುದು ಇನ್ನೂ ತಿಳಿದುಬಂದಿಲ್ಲ.
ಈ ಹಿನ್ನೆಲೆಯಲ್ಲಿ ಈಗಾಗಲೇ ಆಸ್ಪತ್ರೆಗೆ ದಾಖಲಾದ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಈ ಸಂಬಂಧ ಅಧ್ಯಯನ ನಡೆಸಲು ಮೂವರು ಸದಸ್ಯರ ವಿಶೇಷ ವೈದ್ಯರ ತಂಡವನ್ನು ಕೇಂದ್ರ ಸರ್ಕಾರ ಮಂಗಳವಾರ ಎಲೂರಿಗೆ ಕಳುಹಿಸಿದೆ. ಸಿಎಂ ಜಗನ್ ಮೋಹನ್ ರೆಡ್ಡಿ ಸೋಮವಾರ ಸಂತ್ರಸ್ತ ಪ್ರದೇಶಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಭಾನುವಾರದಿಂದ ಮಂಗಳವಾರ ಬೆಳಗ್ಗಿನವರೆಗೆ 505 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. 17 ಜನರನ್ನು ವಿಜಯವಾಡ ಮತ್ತು ಗುಂಟೂರು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಒಂದು ಬಾರಿ ರೋಗ ಲಕ್ಷಣಗಳನ್ನು ಹೊಂದಿ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾದವರಲ್ಲಿ, ಮತ್ತೆ ಮತ್ತೆ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಓದಿ : ಆಂಧ್ರದ ಎಲೂರಿನಲ್ಲಿ 345 ಮಂದಿಗೆ ವಿಚಿತ್ರ ಕಾಯಿಲೆ: ಅಸ್ವಸ್ಥರನ್ನು ಭೇಟಿಯಾದ ಜಗನ್
ಜಿಲ್ಲಾಸ್ಪತ್ರೆಯ ಹೊರತಾಗಿ, ಕೆಲವರು ಎಲೂರಿನ ಇತರ ಖಾಸಗಿ, ಕಾರ್ಪೊರೇಟ್ ಮತ್ತು ಆರ್‌ಎಂಪಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಲ ಮಾಲಿನ್ಯದಿಂದಾಗಿ ಈ ರೀತಿಯ ರೋಗಗಳು ಜನರನ್ನು ಕಾಡುತ್ತಿವೆ ಎನ್ನಲಾಗುತ್ತಿದೆ.
ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿಯಲ್ಲೂ ಈ ವಿಚಿತ್ರ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಸೋಮವಾರ ಎಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ನರ್ಸ್ ರಂಜಿನಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವಾಗ ಫಿಟ್ಸ್ ಬಂದು ಇದ್ದಕ್ಕಿದ್ದಂತೆ ಬಿದ್ದಿದ್ದಾರೆ. ಈ ಘಟನೆಯು ವೈದ್ಯಕೀಯ ಸಿಬ್ಬಂದಿಯಲ್ಲೂ ಕಳವಳ ತಂದಿಟ್ಟಿದೆ.
ಎಲೂರು ಘಟನೆಯಲ್ಲಿ ಅನಾರೋಗ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಉತ್ತಮ ಚಿಕಿತ್ಸೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಜಗನ್ ರೆಡ್ಡಿ ಹೇಳಿದ್ದಾರೆ.