ಯಮುನಾ ನಗರ (ಹರಿಯಾಣ): ಒಂಟಿ ಸಲಗವು ಕಾಡಿನಿಂದ ರಾಷ್ಟ್ರೀಯ ಹೆದ್ದಾರಿಗೆ ಬಂದು ಎರಡು ಗಂಟೆಗಳಿಗೂ ಅಧಿಕ ಕಾಲ ಮೋಜು ಮಸ್ತಿ ಮಾಡಿದೆ. ಯಮುನಾ ನಗರ-ಪಾವೋಂಟಾ ಸಾಹಿಬ್ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆ ಜಾಲಿಯಾಗಿ ಅಡ್ಡಾಡಿದೆ. ಈ ವೇಳೆ, ಹೆದ್ದಾರಿಯಲ್ಲಿ ಟ್ರಾಫಿಕ್ ಜಾಂ ಉಂಟಾಗಿತ್ತು. ಆದರೂ, ಪ್ರಯಾಣಿಕರು ಗಜರಾಜನ ಚೇಷ್ಟೆ ಕಣ್ತುಂಬಿಕೊಂಡರು.
ಯಮುನಾ ನಗರ-ಪಾವೋಂಟಾ ಸಾಹಿಬ್ ಮಾರ್ಗವು ಕಾಲೇಸರ್ ಅರಣ್ಯ ಉದ್ಯಾನದ ಮೂಲಕ ಹಾದು ಹೋಗುತ್ತದೆ. ಕಾಲೇಸರ್ ಅರಣ್ಯ ಉದ್ಯಾನವು ಉತ್ತರಾಖಂಡದ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲಿದೆ. ಸಾಮಾನ್ಯವಾಗಿ ರಾಷ್ಟ್ರೀಯ ಉದ್ಯಾನದ ಕಾಡು ಪ್ರಾಣಿಗಳು ಆಗಾಗ್ಗೆ ಕಾಡುಗಳಿಂದ ರಸ್ತೆಗಳಿಗೆ ಬರುತ್ತವೆ.
ಇಂದು ಮುಂಜಾನೆ ಕೂಡ ಈ ಆನೆಯು ಹೆದ್ದಾರಿಯಲ್ಲಿ ಸೊಪ್ಪು ತಿನ್ನುತ್ತಾ ಹಾಯಾಗಿ ತಿರುಗಾಡಿದೆ. ಸುಮಾರು ಎರಡು ಗಂಟೆಗಳ ಕಾಲ ರಸ್ತೆಯಲ್ಲಿ ಮೋಜು ಮಸ್ತಿ ಮಾಡಿದ್ದು, ಜನರು ಎಷ್ಟೇ ಪ್ರಯತ್ನಿಸಿದರೂ ಅದನ್ನು ಓಡಿಸಲಾಗಲಿಲ್ಲ. ಬಳಿಕ ವಾಹನ ಸವಾರರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು, ಸಿಬ್ಬಂದಿ ಆನೆಯನ್ನು ಕಾಡಿಗೆ ಓಡಿಸಿದ್ದಾರೆ.
ಹೆದ್ದಾರಿಯಲ್ಲಿ ಕೇವಲ ಆನೆಯಷ್ಟೇ ಅಲ್ಲ. ಸಿಂಹ, ಚಿರತೆ, ಹುಲಿಗಳು ಕೂಡ ಬರುತ್ತವೆ. ಹೀಗಾಗಿ ದಾರಿಗಳಲ್ಲಿ ಎಚ್ಚರಿಕೆಯ ಫಲಕವನ್ನು ಅಳವಡಿಸಲಾಗಿದೆ.