ಉತ್ತರಾಖಂಡ: ಅಳಿವಿನಂಚಿನಲ್ಲಿರುವ ಬಂಗಾಳ ಹುಲಿಗಳ ಸಂರಕ್ಷಿತ ತಾಣವಾಗಿರುವ ವಿಶ್ವವಿಖ್ಯಾತ ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಆನೆ ಗೋಮತಿ ಮತ್ತು ಕಾವಲು ಶ್ವಾನ ಇಂದು (ಅಕ್ಟೋಬರ್ 4) ತಮ್ಮ ಕೆಲಸದಿಂದ ನಿವೃತ್ತಿಯಾಗಿದ್ದು, ಸಕಲ ಗೌರವಗಳಿಂದ ಬೀಳ್ಕೊಡಲಾಯಿತು.
ಉದ್ಯಾನವನದಲ್ಲಿ ಅರಣ್ಯ ನಾಶ ತಡೆ ಮತ್ತು ವನ್ಯಜೀವಿಗಳ ರಕ್ಷಣೆಗೆ ಉದ್ಯೋಗಿಗಳ ಜೊತೆಗೆ, ಆನೆಗಳು ಮತ್ತು ಕಾವಲು ನಾಯಿಗಳನ್ನು ನಿಯೋಜಿಸಲಾಗಿದೆ. ಅವುಗಳಲ್ಲಿ ಆನೆ ಮತ್ತು ನಾಯಿ ಈಗ ವಯೋಸಹಜವಾಗಿ ಜವಾಬ್ದಾರಿಯಿಂದ ಬಿಡುಗಡೆ ಹೊಂದಿವೆ. ಕಾಡುಗಳಲ್ಲಿ ಗಸ್ತು ತಿರುಗಲು, ಬೇಟೆಗಾರರಿಂದ ವನ್ಯಜೀವಿಗಳನ್ನು ರಕ್ಷಿಸಲು ಇವುಗಳನ್ನು ಕಾವಲು ಇಡಲಾಗಿತ್ತು. ಜನರ ಪ್ರವಾಸದ ವೇಳೆ ಹುಲಿ ಅಥವಾ ಚಿರತೆಗಳು ದಾಳಿ ಮಾಡದಂತೆ ಇವುಗಳನ್ನು ಬಳಸಲಾಗುತ್ತಿತ್ತು.
47 ವರ್ಷಗಳ ಸೇವೆ ಕೊನೆ: ಗೋಮತಿ ಆನೆ ಕಳೆದ 47 ವರ್ಷಗಳಿಂದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಸೇವೆಯಲ್ಲಿ ಹಗಲಿರುಳು ನಿರತವಾಗಿತ್ತು. ಕಾವಲು ಶ್ವಾನ 8 ವರ್ಷಗಳಿಂದ ಅರಣ್ಯವನ್ನು ಕಾವಲು ಕಾಯುತ್ತಿದೆ. ಎಲಿಫೆಂಟ್ ಗೈಡ್ ಲೈನ್ ಪ್ರಕಾರ, ಯಾವುದೇ ಆನೆಯನ್ನು 65 ವರ್ಷ ವಯಸ್ಸಿನವರೆಗೆ ಮಾತ್ರ ಕೆಲಸಗಳಲ್ಲಿ ಬಳಸಿಕೊಳ್ಳಬಹುದಾಗಿದೆ. ಗೋಮತಿ ಆನೆಗೆ ಈಗ 65 ವರ್ಷ ವಯಸ್ಸಾಗಿದೆ. ಹೀಗಾಗಿ ಗೋಮತಿಗೆ ವಿಶ್ರಾಂತಿ ನೀಡಲಾಗುತ್ತಿದೆ. ಈ ಆನೆ ತನ್ನ 18 ನೇ ವಯಸ್ಸಿನಲ್ಲಿಯೇ ಲಖನೌನಿಂದ ಜಿಮ್ ಕಾರ್ಬೆಟ್ ಅಭಯಾರಣ್ಯಕ್ಕೆ ಕರೆತರಲಾಗಿತ್ತು. ಅಂದಿನಿಂದ ಸೇವೆಯಲ್ಲಿತ್ತು.
ಗೋಮತಿ ವಯೋಸಹಜವಾಗಿ ನಿವೃತ್ತಿ ಹೊಂದಿದ್ದಾಳೆ. ತಾಯಿಯಂತೆ ಅದು ನಮ್ಮನ್ನು ನೋಡಿಕೊಂಡಿದೆ ಎಂದು ಆನೆಯ ಮಾವುತ ಫಾರೂಖ್ ಖಾನ್ ಹೇಳಿದರೆ, ಅರಣ್ಯದಲ್ಲಿ ಒಮ್ಮೆ ಹುಲಿ ದಾಳಿ ಮಾಡಿತ್ತು. ದಾಳಿಯಿಂದ ತೀವ್ರ ಗಾಯಗೊಂಡಿದ್ದ ನನ್ನನ್ನು ಅರಣ್ಯದೊಳಗಿನಿಂದ 20 ನಿಮಿಷದಲ್ಲಿ ಆಸ್ಪತ್ರೆಗೆ ಕರೆತಂದು ಪ್ರಾಣ ಉಳಿಸಿತು ಎಂದು ಮಾಜಿ ಮಾವುತ ಸುಬೇದಾರ್ ಅಲಿ ನೆನಪಿಸಿಕೊಂಡರು.
ಲಘು ಕೆಲಸದಲ್ಲಿ ಬಳಕೆ: ಕಾರ್ಬೆಟ್ ಪಾರ್ಕ್ನ ನಿರ್ದೇಶಕ ಡಾ.ಧೀರಜ್ ಪಾಂಡೆ ಮಾತನಾಡಿ, 47 ವರ್ಷಗಳ ಸತತ ಸೇವೆಯ ನಂತರ ಗೋಮತಿ ಇಂದು ನಿವೃತ್ತರಾಗಿದ್ದಾಳೆ. ಪ್ರಾಣಿ ನಿಯಮಗಳ ಪ್ರಕಾರ, 65 ವರ್ಷ ಮೇಲ್ಪಟ್ಟ ಕೆಲಸಗಳಿಗೆ ಬಳಸುವಂತಿಲ್ಲ. ಹೀಗಾಗಿ ಆನೆಗೆ ನಿವೃತ್ತಿ ನೀಡಲಾಗಿದೆ. ಆನೆಯನ್ನು ಇಲ್ಲೇ ಉಳಿಸಿಕೊಂಡು ಹುಲ್ಲು ತರುವುದು, ಅಗತ್ಯವಿದ್ದಾಗ ಗಸ್ತುವಿನಂತಹ ಲಘು ಕೆಲಸಗಳು ನೀಡಲಾಗುತ್ತದೆ. ಗೋಮತಿ ಜೊತೆಗೆ ಕಳೆದ 8 ವರ್ಷಗಳಿಂದ ಕಾವಲು ಕಾಯುತ್ತಿದ್ದ ಸ್ನಿಪ್ಫರ್ ನಾಯಿ ಕೂಡ ನಿವೃತ್ತಿಯಾಗಿದೆ. ಅದಕ್ಕೂ ಇಲಾಖೆಯ ಬೇರೆ ಹುದ್ದೆಗೆ ನಿಯೋಜಿಸಲಾಗುವುದು ಎಂದು ವಿವರಿಸಿದರು.
ಇದನ್ನೂ ಓದಿ: 4ನೇ ಬಾರಿಗೆ ಚಿನ್ನದ ಅಂಬಾರಿ ಹೊರಲು ರೆಡಿಯಾಗುತ್ತಿರುವ ಕ್ಯಾಪ್ಟನ್ ಅಭಿಮನ್ಯು: ವಿಡಿಯೋ