ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರ ರಾಜಕಾರಣದಲ್ಲಿ ಇಂದಿನಿಂದ ಹೊಸ ಆಡಳಿತ ಪರ್ವ ಆರಂಭವಾಗಿದೆ. ನೂತನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಉಭಯ ನಾಯಕರಿಗೆ ಅಧಿಕಾರದ ಗೌಪ್ಯತೆಯನ್ನು ಬೋಧಿಸಿದರು. ರಾಜಭವನದಲ್ಲಿ ಸರಳ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಇದಕ್ಕೂ ಮುನ್ನ ನೂತನ ಸರ್ಕಾರದಲ್ಲಿ ತಾವು ಭಾಗಿಯಾಗಲ್ಲ ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಸೂಚನೆಯ ಮೇರೆಗೆ ಅವರು ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಸಮ್ಮತಿಸಿದ್ದಾರೆ. ಈ ಹಿಂದೆ ಫಡ್ನವೀಸ್ 2014ರ ಅಕ್ಟೊಬರ್ 31ರಿಂದ 2019ರ ನವೆಂಬರ್ 12ರವರೆಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಶಿಂಧೆ ಸರ್ಕಾರ ಸೇರಲು ಫಡ್ನವೀಸ್ ಒಪ್ಪಿಗೆ; ಡೆಪ್ಯೂಟಿ ಸಿಎಂ ಸ್ಥಾನ
ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಇಂದು ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿ ಮಾಡಿದ್ದ ದೇವೇಂದ್ರ ಫಡ್ನವೀಸ್ ಹಾಗೂ ಏಕನಾಥ್ ಶಿಂಧೆ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದರು.