ಭೋಪಾಲ್ (ಮಧ್ಯಪ್ರದೇಶ): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ಗೆ ವಿದಾಯ ಹೇಳಿ ಇಂದಿಗೆ 8 ವರ್ಷ ಪೂರ್ಣಗೊಂಡಿದೆ. ನವೆಂಬರ್ 16, 2013ರಂದು ಕ್ರಿಕೆಟ್ಗೆ ವಿದಾಯ ಹೇಳಿದ್ದ ಕ್ರಿಕೆಟ್ ದೇವರು ಬ್ಯಾಟಿಂಗ್ ಮುಂದುವರೆಸಿದ್ದಾರೆ. ಅಚ್ಚರಿಯಾದರೂ ಸತ್ಯ.. ಅವರು ಬ್ಯಾಟ್ ಹಿಡಿಯುತ್ತಿರುವುದು ಮೈದಾನದ ಒಳಗಲ್ಲ. ಮೈದಾನದ ಹೊರಗೆ ಸಮಾಜ ಅಭಿವೃದ್ಧಿಗಾಗಿ..ಅನಕ್ಷರತೆಯ ವಿರುದ್ಧ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಹೌದು.. ಸಚಿನ್ ತೆಂಡೂಲ್ಕರ್ ಮಧ್ಯಪ್ರದೇಶದ ವಿವಿಧ ಪ್ರದೇಶಗಳಲ್ಲಿ ಬುಡಕಟ್ಟು ಸಮುದಾಯಗಳ ಮಕ್ಕಳಿಗೆ ಶಿಕ್ಷಣ ಒದಗಿಸುವ ಸಲುವಾಗಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಸಚಿನ್ ತೆಂಡೂಲ್ಕರ್ ಮಾಡುತ್ತಿದ್ದಾರೆ. ತಂದೆ ರಮೇಶ್ ತೆಂಡೂಲ್ಕರ್ ಅವರ ಸ್ಮರಣಾರ್ಥವಾಗಿ ತೆಂಡೂಲ್ಕರ್ ಪ್ರತಿಷ್ಠಾನ ಪರಿವಾರ ಎಂಬ ಸರ್ಕಾರೇತರ ಸಂಸ್ಥೆಯ ಸಹಯೋಗದಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಅವರು ಮಾಡುತ್ತಿದ್ದು, ತಾವು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ದಿನವನ್ನೇ ತಮ್ಮ ಸಾಮಾಜಿಕ ಕಾರ್ಯಗಳ ಪರಿಶೀಲನೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ಅಂದರೆ ನವೆಂಬರ್ 16 (ಬುಧವಾರ) ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಾಮಾಜಿಕ ಕಾರ್ಯಗಳಲ್ಲಿ ತೆಂಡೂಲ್ಕರ್ ಬ್ಯಾಟಿಂಗ್
ಹಲವಾರು ಸಾಮಾಜಿಕ ಕಾರ್ಯಗಳನ್ನು ಸಚಿನ್ ತೆಂಡೂಲ್ಕರ್ ಮಾಡುತ್ತಿದ್ದಾರೆ. ಆದರೆ ಸಾಂಕ್ರಾಮಿಕ ರೋಗದ ಭೀತಿಯಿಂದಾಗಿ ಅವರು ಯಾವುದೇ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ತೆಂಡೂಲ್ಕರ್ ಪ್ರತಿಷ್ಠಾನ ಅಡಿ ಪರಿವಾರ ಎಂಬ ಎನ್ಜಿಒ ಮಧ್ಯಪ್ರದೇಶದ ಸೇವಾನಿಯಾ ಗ್ರಾಮದಲ್ಲಿ ನಿರ್ಮಾಣ ಮಾಡಿರುವ 'ಸೇವಾ ಕುಟೀರ'ಗಳಿಗೂ ಸಚಿನ್ ತೆಂಡೂಲ್ಕರ್ ಭೇಟಿ ನೀಡಿದ್ದಾರೆ. ಈ ಸೇವಾ ಕುಟೀರಗಳಲ್ಲಿ ಬುಡಕಟ್ಟು ಸಮುದಾಯದ ಮಕ್ಕಳಿಗೆ ಶಿಕ್ಷಣ, ಪೌಷ್ಟಿಕ ಊಟ, ಕ್ರೀಡೆಗಳಿಗೆ ತರಬೇತಿ ನೀಡಲಾಗುತ್ತದೆ.
ಮಕ್ಕಳೊಂದಿಗೆ ಬೆರೆತ ಸಚಿನ್
ಸೇವಾ ಕುಟೀರಕ್ಕೆ ಭೇಟಿ ನೀಡಿದ ಸಚಿನ್ ತೆಂಡೂಲ್ಕರ್ ಮಕ್ಕಳೊಂದಿಗೆ ಬೆರೆತಿದ್ದಾರೆ. ಅವರ ಜೊತೆ ಕೆಲವು ಆಟಗಳನ್ನೂ ಆಡಿದ್ದಾರೆ. ಅವರಿಗೆ ತಮ್ಮ ತಮ್ಮ ಕನಸುಗಳನ್ನು ಪೂರೈಸಿಕೊಳ್ಳಲು ಪ್ರಯತ್ನ ಮಾಡುವಂತೆ ಪ್ರೇರೇಪಿಸಿ, ಪ್ರೋತ್ಸಾಹಿಸಿದ್ದಾರೆ. ಅಲ್ಲಿನ ಶಿಕ್ಷಕರೊಂದಿಗೆ ಕೂಡಾ ಮಾತುಕತೆ ನಡೆಸಿದ್ದಾರೆ. ಜೊತೆಗೆ ಮಕ್ಕಳಿಗೆ ಅಡುಗೆಯನ್ನು ಹೇಗೆ ಮಾಡಲಾಗುತ್ತದೆ ಎಂದು ತಿಳಿದುಕೊಳ್ಳಲು ಅಡುಗೆ ಮನೆಗೂ ಭೇಟಿ ನೀಡಿದ್ದಾರೆ.
ಸಂದಲ್‌ಪುರಕ್ಕೂ ಭೇಟಿ ನೀಡಿದ ಸಚಿನ್ ತೆಂಡೂಲ್ಕರ್ ತಮ್ಮ ಪ್ರತಿಷ್ಠಾನದಿಂದ ನಿರ್ಮಾಣವಾಗುತ್ತಿರುವ ಶಾಲೆಯ ನಿರ್ಮಾಣ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿದರು. ಬುಡಕಟ್ಟು ಸಮುದಾಯದ ಮಕ್ಕಳಿಗೆ ವಸತಿ ಶಾಲೆಯನ್ನು ನಿರ್ಮಾಣ ಮಾಡಲಾಗುತ್ತಿದ್ದು, ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ನೀಡುವ ಉದ್ದೇಶವನ್ನು ಹೊಂದಿದೆ.
ಲೆಜೆಂಡ್ ನೆರವಿನಿಂದ ಸಾವಿರಾರು ಮಕ್ಕಳಿಗೆ ಪ್ರಯೋಜನ
ಸಚಿನ್ ತೆಂಡೂಲ್ಕರ್ ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದು, ನಮ್ಮ ಎನ್ಜಿಒಗೆ ಬೆಂಬಲ ನೀಡುತ್ತಿದ್ದಾರೆ. ಇದರಿಂದ ಸಾವಿರಾರು ಬುಡಕಟ್ಟು ಸಮುದಾಯದ ಮಕ್ಕಳು ಪ್ರಯೋಜನ ಪಡೆಯುತ್ತಿದ್ದಾರೆ. ಅವರೊಂದಿಗೆ ದೀರ್ಘಾವಧಿಯ ಒಡನಾಟವನ್ನು ನಾವು ಬಯಸುತ್ತೇವೆ ಎಂದು ಪರಿವಾರ ಎನ್ಜಿಒ ಸಂಸ್ಥಾಪಕರಾದ ವಿನಾಯಕ್ ಲೋಹಾನಿ ಅಭಿಪ್ರಾಯಪಟ್ಟಿದ್ದಾರೆ.
ಸಚಿನ್ ತೆಂಡೂಲ್ಕರ್ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಟೀಂ ಇಂಡಿಯಾಗಾಗಿ ಮೈದಾನದ ಒಳಗೆ ಮತ್ತು ಹೊರಗೆ ಆಟವಾಡುವುದು ತುಂಬಾ ವಿಶೇಷವಾಗಿದೆ. ಪರಿವಾರ ಸಂಸ್ಥೆಯೊಂದಿಗೆ ನಾವು ನಿರ್ಮಿಸುತ್ತಿರುವ ಸೇವಾ ಕುಟೀರಗಳು ಮತ್ತು ಉಚಿತ ವಸತಿ ಶಾಲೆಗೆ ಭೇಟಿ ನೀಡಿರುವುದು ತೃಪ್ತಿ ತಂದಿದೆ. ನಮ್ಮ ಮಕ್ಕಳು ಈ ಜಗತ್ತನ್ನು ಉತ್ತಮಗೊಳಿಸುತ್ತಾರೆ. ಅವರಿಗೆ ಸಮಾನ ಅವಕಾಶ ಸಿಗುವಂತೆ ನಾವು ನೋಡಿಕೊಳ್ಳಬೇಕು ಎಂದಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದ ಆಕ್ರಮಿತ ಪ್ರದೇಶಗಳಿಂದ ಪಾಕಿಸ್ತಾನ ಜಾಗ ಖಾಲಿ ಮಾಡಬೇಕು: ವಿಶ್ವಸಂಸ್ಥೆಯಲ್ಲಿ ಭಾರತ ಒತ್ತಾಯ