ವಾರಣಾಸಿ (ಉತ್ತರ ಪ್ರದೇಶ): ಜನ್ಮ ದಿನಾಚರಣೆಯ ಕೇಕ್ ತಿಂದು 8 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಶ್ವಾಸನಾಳದಲ್ಲಿ ಕೇಕ್ ಸಿಲುಕಿದ ಕಾರಣ ಉಸಿರಾಟದ ತೊಂದರೆ ಅನುಭವಿಸಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಇಲ್ಲಿನ ಜನ್ಸಾ ಪೊಲೀಸ್ ಠಾಣಾ ವ್ಯಾಪ್ತಿಯ ಸಜೋಯ್ ಗ್ರಾಮದ ನಿವಾಸಿ, ಶಿಕ್ಷಕ ಧೀರಜ್ ಶ್ರೀವಾಸ್ತವ್ ಮನೆಯಲ್ಲಿ ಸೋಮವಾರ ಹಿರಿಮಗನ ಹುಟ್ಟುಹಬ್ಬ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಾತ್ರಿ ಮನೆಯಲ್ಲಿ ಕೇಕ್ ಕತ್ತರಿಸಿ ಕುಟುಂಬ ಸದಸ್ಯರೆಲ್ಲರೂ ಸಂಭ್ರಮಿಸುತ್ತಿದ್ದರು. ಆದರೆ, ಶ್ರೀವಾಸ್ತವ್ ಅವರ ಕಿರಿಮಗನಿಗೆ ಕೇಕ್ ತಿಂದ ಬಳಿಕ ಆರೋಗ್ಯ ಹದಗೆಟ್ಟಿದೆ. ಕೇಕ್ ತುಂಡು ಗಂಟಲಿನಲ್ಲಿ ಸಿಲುಕಿದ್ದು ಉಸಿರಾಡಲು ಸಮಸ್ಯೆ ಉಂಟಾಗಿದೆ. ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಎರಡು ದಿನಗಳ ಚಿಕಿತ್ಸೆ ಬಳಿಕ ಬಾಲಕ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಮೊಬೈಲ್ ಚಾರ್ಜರ್ ಬಾಯಿಗೆ ಇಟ್ಟುಕೊಂಡಾಗ ವಿದ್ಯುತ್ ಪ್ರವಹಿಸಿ ಮಗು ಸಾವು: ಮಕ್ಕಳ ಬಗ್ಗೆ ಗಮನವಿರಲೆಂದು ವೈದ್ಯರ ಸಲಹೆ
ಈ ಕುರಿತು ಬಾಲಕನ ತಂದೆ ಧೀರಜ್ ಶ್ರೀವಾಸ್ತವ್ ಮಾತನಾಡಿ, "ಹಿರಿಯ ಮಗನ ಜನ್ಮದಿನ ಆಚರಿಸಲು ಮನೆಗೆ ಕೇಕ್ ತರಲಾಗಿತ್ತು. ಕಿರಿಮಗನಿಗೆ ಕೇಕ್ ತಿಂದ ತಕ್ಷಣ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ಆತಂಕದಿಂದಲೇ ನಾವು ಹತ್ತಿರದ ಆಸ್ಪತ್ರೆಗೆ ಕರೆದೊಯ್ದೆವು. ಇಲ್ಲಿಂದ ಇತರ ಎರಡು ಆಸ್ಪತ್ರೆಗಳಿಗೆ ರೆಫರ್ ಮಾಡಲಾಗಿತ್ತು.''
''ವೈದ್ಯರ ಸಲಹೆಯ ಮೇರೆಗೆ ಎರಡು ಆಸ್ಪತ್ರೆಗಳಿಗೆ ಮಗನನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದೆವು. ಆದರೂ, ಆತ ಬದುಕುಳಿಯಲಿಲ್ಲ. ಶ್ವಾಸನಾಳದಲ್ಲಿ ಕೇಕ್ ಸಿಕ್ಕಿಹಾಕಿಕೊಂಡಿತ್ತು. ಇದರಿಂದ ಉಸಿರಾಡಲು ಕಷ್ಟಪಡುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದರು'' ಎಂದು ತಿಳಿಸಿದರು.
ಬಾಲಕನ ಹಠಾತ್ ಸಾವು ಹೆತ್ತವರು ಮತ್ತು ಕುಟುಂಬಸ್ಥರನ್ನು ಕಂಗೆಡಿಸಿದೆ. ಮೂರು ದಿನಗಳ ಹಿಂದೆ ಹಿರಿಮಗನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ ಕುಟುಂಬ ಈಗ ಕಿರಿಮಗನ ಸಾವಿನ ದುಃಖದಲ್ಲಿ ಮುಳುಗಿದೆ. ಆಸ್ಪತ್ರೆಗಳಿಗೆ ಅಲೆದರೂ ಬಾಲಕನನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು ಸಹ ಕುಟುಂಬಸ್ಥರನ್ನು ಕಾಡುತ್ತಿದೆ.
ಬಟನ್ ನುಂಗಿದ ಮಗು, ಪ್ರಾಣ ಉಳಿಸಿದ ವೈದ್ಯರು: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಇತ್ತೀಚಿಗೆ ಎರಡು ತಿಂಗಳ ಮಗುವೊಂದು ಚಾಕಲೇಟ್ ಎಂದು ತಿಳಿದು ಪ್ಯಾಂಟ್ನ ಗುಂಡಿ (ಬಟನ್) ನುಂಗಿತ್ತು. ಇದು ಗಂಟಲಿನಲ್ಲಿ ಸಿಲುಕಿ ಪಟ್ಟು ಮಗು ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿತ್ತು. ಹೀಗಾಗಿ ತಕ್ಷಣವೇ ತಾಲೂಕು ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಪೋಷಕರು ದಾಖಲಿಸಿದ್ದರು. ಅಂತೆಯೇ, ಇಎನ್‌ಟಿ ತಜ್ಞ ಡಾ.ಸತೀಶ್ ನೇತೃತ್ವದ ವೈದ್ಯರ ತಂಡ, ಕೊಳವೆ ಮೂಲಕ ಚಿಕಿತ್ಸೆ ನಡೆಸಿ ಗಂಟಲಿನಲ್ಲಿ ಸಿಲುಕಿದ್ದ ಗುಂಡಿಯನ್ನು ಹೊರಗೆ ತೆಗೆದು ಪ್ರಾಣ ಉಳಿಸಿದ್ದರು.
ಇದನ್ನೂ ಓದಿ: ಭಟ್ಕಳ: ಚಾಕಲೇಟ್ ಎಂದು ಪ್ಯಾಂಟ್ ಬಟನ್ ನುಂಗಿದ ಮಗು; ಪ್ರಾಣ ಕಾಪಾಡಿದ ವೈದ್ಯರು