ತಿರುವನಂತಪುರಂ : ಸಾಕ್ಷರತಾ ರಾಜ್ಯ ಎಂದು ಹೆಮ್ಮೆ ಪಡುವ ಕೇರಳದಲ್ಲಿ ಉನ್ನತ ಶಿಕ್ಷಣ ಪಡೆದವರೇ ಅಪರಾಧ ಕೃತ್ಯಗಳನ್ನೆಸಗಿ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಅಂಕಿ-ಅಂಶಗಳು ಬಹಿರಂಗಗೊಂಡಿವೆ. ರಾಜ್ಯದಲ್ಲಿ 137 ಕೈದಿಗಳು ಪದವಿ ಪೂರ್ವ ಶಿಕ್ಷಣ ಪಡೆದಿದ್ದಾರೆ. ಲೈಂಗಿಕ ದೌರ್ಜನ್ಯವೆಸಗಿ ಶಿಕ್ಷೆ ಅನುಭವಿಸುತ್ತಿರುವ 28 ಜನರ ಪೈಕಿ 17 ಮಂದಿಯನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ. ಇವರೆಲ್ಲ ಇನ್ನೂ ವಿದ್ಯಾಭ್ಯಾಸ ಪೂರ್ಣಗೊಳಿಸಿರಲಿಲ್ಲ.
37 ಕೈದಿಗಳು ಕೊಲೆ ಆರೋಪದ ಮೇಲೆ ಶಿಕ್ಷೆಗೆ ಒಳಗಾಗಿದ್ರೆ, 11 ಮಂದಿ ಕಳ್ಳತನ ಮಾಡಿ ಜೈಲು ಸೇರಿದ್ದಾರೆ. 19 ಮಂದಿ ಮಾದಕ ವಸ್ತು ಕಳ್ಳಸಾಗಣೆ ಮಾಡಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದಾರೆ. 103 ಮಂದಿ ಯುಜಿ ಪದವಿ ಪಡೆದವರು, 18 ಜನ ಸ್ನಾತಕೋತ್ತರ ಪದವೀಧರರು ವಿವಿಧ ಕಾರಾಗೃಹದಲ್ಲಿ ಶಿಕ್ಷೆಗೊಳಗಾಗಿದ್ದಾರೆ.
ಇಬ್ಬರು ಕೈದಿಗಳು ಎಂ.ಫಿಲ್ ಪೂರ್ಣಗೊಳಿಸಿದ್ದಾರೆ. ಇಬ್ಬರು ಎಂಬಿಬಿಎಸ್ ಮಹಿಳಾ ಪದವೀಧರರು ತಿರುವನಂತಪುರಂ ಕಾರಾಗೃಹದಲ್ಲಿದ್ದಾರೆ. ತಾಂತ್ರಿಕ ಶಿಕ್ಷಣ ಪಡೆದ ಏಳು, ಬಿಇಡಿ ಮಾಡಿರುವ ಒಬ್ಬ, ವೃತ್ತಿಪರ ಪದವಿ ಪೂರೈಸಿರುವ ಆರು ಮಂದಿ ಶಿಕ್ಷೆಗೊಳಪಟ್ಟಿದ್ದಾರೆ.
ತಿರುವನಂತಪುರಂನಲ್ಲಿ ಓರ್ವ ಮಹಿಳಾ ಅಪರಾಧಿ ಜೈಲಲ್ಲಿದ್ದುಕೊಂಡೇ ಯುಜಿ ಮತ್ತು ಪಿಜಿ ಪದವಿಗಳನ್ನು ಮಾಡಿದ್ದಾರೆ. ಬಹುತೇಕ ವಿದ್ಯಾವಂತರು, ಅಪರಾಧ ಕೃತ್ಯಗಳಲ್ಲಿ ತೊಡಗುವ ಮುನ್ನ ಪರಿಣಾಮಕಾರಿಯಾಗಿ ಸಂಚು ರೂಪಿಸುತ್ತಾರೆ. ಅಲ್ಲದೆ ಹೆಚ್ಚು ಓದಿರುವ ಆರೋಪಿಗಳನ್ನು ತನಿಖಾಧಿಕಾರಿಗಳು ಬಂಧಿಸುವುದು ತೀರಾ ಕಡಿಮೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.