ನವದೆಹಲಿ: ಕಳೆದ ವರ್ಷದ ಜೂನ್ ತಿಂಗಳಲ್ಲಿ ಪ್ರತಿ ಲೀಟರ್ ಅಡುಗೆ ಎಣ್ಣೆ ಬೆಲೆ ರೂ. 100ರ ಆಸುಪಾಸಿನಲ್ಲಿತ್ತು. ಈ ವರ್ಷದ ಜನವರಿ ತಿಂಗಳಷ್ಟರಲ್ಲಿ ಇದರ ಬೆಲೆ 150 ರೂಪಾಯಿ ಗಡಿ ದಾಟಿದೆ. ಇದರ ಬೆನ್ನಲ್ಲೇ ಕೆಲವೊಂದು ತೈಲ ಕಂಪನಿಗಳು ಬೆಲೆ ಕಡಿಮೆ ಮಾಡುವ ಮೂಲಕ ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡಿದ್ದವು. ಇದೀಗ ಮತ್ತೆ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಕಂಡು ಬರಲಿದೆ.
ಖಾದ್ಯ ತೈಲ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಮಾಡಲು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆ ಹೊರಡಿಸಿದೆ. ಈ ಮೂಲಕ, ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಲೀಟರ್ಗೆ 5 ರೂಪಾಯಿಯಿಂದ 20 ರೂವರೆಗೆ ಇಳಿಕೆಯಾಗಲಿದೆ.
ಇದನ್ನೂ ಓದಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿ ವಿಸ್ತರಣೆ: ಮಾ.15ರವರೆಗೆ ಅವಕಾಶ
ಪ್ರಮುಖ ಖಾದ್ಯ ತೈಲ ಕಂಪನಿಗಳಾದ ಅದಾನಿ ವಿಲ್ಮರ್, ರುಚಿ ಸೋಯಾ ಪ್ರತಿ ಲೀಟರ್ ಬೆಲೆಯಲ್ಲಿ 15ರಿಂದ 20 ರೂ ಕಡಿಮೆಯಾಗಲಿದೆ. ಇತರೆ ಕಂಪನಿಗಳಾಗಿರುವ ಜೆಮಿನಿ ಎಡಿಬಲ್ಸ್, ಫ್ಯಾಟ್ಸ್ ಇಂಡಿಯಾ, ಮೋದಿ ನ್ಯಾಚುರಲ್ಸ್, ಗೋಕುಲ್ ರಿ-ಫಾಯಿಲ್ಸ್ ಸೇರಿದಂತೆ ಇತರೆ ಸಂಸ್ಥೆಗಳ ಖಾದ್ಯ ತೈಲದ ಬೆಲೆಯಲ್ಲೂ ಇಳಿಕೆಯಾಗಲಿದೆ.
ಕಚ್ಚಾ ಪಾಮ್ ಆಯಿಲ್ ಮತ್ತು ಕಚ್ಚಾ ಸೋಯಾಬಿನ್ ಮತ್ತು ಸೂರ್ಯಕಾಂತಿ ಎಣ್ಣೆ ಮೇಲೆ ಶೇ. 7.5ರಿಂದ ಶೇ. 5ರಷ್ಟಕ್ಕೆ ಸುಂಕ ಇಳಿಕೆ ಮಾಡಲು ನಿರ್ಧಾರ ಮಾಡಲಾಗಿದೆ. ಸಂಸ್ಕರಿಸಿದ ಸೋಯಾಬಿನ್ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಸುಂಕ ಶೇ. 32.5ರಿಂದ 17.5ಕ್ಕೆ ಇಳಿಕೆ ಮಾಡಲಾಗಿದೆ.