ನವದೆಹಲಿ: ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಹಾಗೂ ಅವರ ಸಹವರ್ತಿಗಳಿಗೆ ಸೇರಿದ ರಾಜಧಾನಿಯಲ್ಲಿರುವ ಹಲವಾರು ಸ್ಥಳಗಳ ಮೇಲೆ ಶುಕ್ರವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದು, ತೀವ್ರ ಪರಿಶೀಲನೆ ಮಾಡುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿವೆ ಎಂದು ತಿಳಿದು ಬಂದಿದೆ.
ಕನಿಷ್ಠ 10 ವಾಸದ ಸ್ಥಳಗಳು ಮತ್ತು ವಾಣಿಜ್ಯ ಕಟ್ಟಡಗಳ ಮೇಲೆ ದಾಳಿ ನಡೆಸಲಾಗಿದೆ. ಶಾಲೆಗಳನ್ನು ನಡೆಸುವ ಪ್ರತಿಷ್ಠಿತ ಸಮೂಹ ಒಂದಕ್ಕೆ ಸೇರಿದ ಸ್ಥಳಗಳ ಮೇಲೆ ಸಹ ದಾಳಿ ನಡೆದಿದೆ. ದೆಹಲಿ ಸಚಿವ ಸತ್ಯೇಂದ್ರ ಜೈನ್ (ವ.57) ಅವರನ್ನು ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆಯಡಿ ಮೇ 30 ರಂದು ಬಂಧಿಸಲಾಗಿತ್ತು ಮತ್ತು ಸದ್ಯಕ್ಕೆ ಬಂಧಿತ ಸಚಿವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಆದೇಶವನ್ನು ದೆಹಲಿ ನ್ಯಾಯಾಲಯ ಕಾಯ್ದಿರಿಸಿದೆ.
ಜೈನ್ ಅವರ ಬಂಧನದ ನಂತರ ಜೈನ್ ಪರಿವಾರ ಹಾಗೂ ಅವರ ನಿಕಟವರ್ತಿಗಳ ಸ್ಥಳಗಳ ಮೇಲೆ ನಡೆದ ದಾಳಿಗಳಲ್ಲಿ ಹಣದ ಮೂಲದ ಮಾಹಿತಿ ಸಿಗದ 2.85 ಕೋಟಿ ರೂಪಾಯಿ ನಗದು ಹಾಗೂ 133 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.
ಸದ್ಯ ಕೇಜ್ರಿವಾಲ್ ನೇತೃತ್ವದ ಸರ್ಕಾರದಲ್ಲಿ ಯಾವುದೇ ಖಾತೆಯನ್ನು ಹೊಂದಿರದ ಸಚಿವರಾಗಿ ಮುಂದುವರೆದಿರುವ ಜೈನ್ ಅವರ ವಿರುದ್ಧ ಹವಾಲಾ ಹಣ ವರ್ಗಾವಣೆಯ ಆರೋಪದಡಿ ಇಡಿ ವಿಚಾರಣೆ ನಡೆಸುತ್ತಿದೆ.
ಇದನ್ನು ಓದಿ:ಭ್ರಷ್ಟರ ಮೇಲೆ ACB ದಾಳಿ: ಕಂತೆ ಕಂತೆ ಹಣ, ಚಿನ್ನಾಭರಣ ಪತ್ತೆ