ನಾಗಪುರ, ಮಹಾರಾಷ್ಟ್ರ: ಭ್ರಷ್ಟಾಚಾರ ಆರೋಪಕ್ಕೆ ಸಿಕ್ಕು ತಮ್ಮ ಗೃಹಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರಿಗೆ ಸಂಕಷ್ಟದ ಮೇಲೆ ಸಂಕಷ್ಟಗಳು ಎದುರಾಗುತ್ತಿವೆ.
ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಶುಕ್ರವಾರ ಅನಿಲ್ ದೇಶಮುಖ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಳಗ್ಗೆ 8.20ರ ಸುಮಾರಿಗೆ ಅನಿಲ್ ದೇಶಮುಖ್ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಅವಶ್ಯಕತೆಗಿಂತ 4 ಪಟ್ಟು ಹೆಚ್ಚು ಆಮ್ಲಜನಕ ಸಂಗ್ರಹ: ಆಡಿಟ್ ಸಮಿತಿ
ಕೇಂದ್ರ ರಿಸರ್ವ್ ಪೊಲೀಸ್ ಪಡೆಯ (ಸಿಆರ್‌ಪಿಎಫ್) ಮಹಿಳಾ ಬೆಟಾಲಿಯನ್ ಅನ್ನು ಅನಿಲ್ ದೇಶಮುಖ್ ಮನೆಯ ಹೊರಗೆ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ದಾಳಿಯ ವೇಳೆ ಅನಿಲ್ ದೇಶಮುಖ್ ನಿವಾಸದಲ್ಲಿ ಇರಲಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದು ಒಂದೇ ತಿಂಗಳಲ್ಲಿ ಅನಿಲ್ ದೇಶಮುಖ್ ನಿವಾಸದ ಮೇಲೆ ನಡೆದ ಜಾರಿ ನಿರ್ದೇಶನಾಲಯದ ಎರಡನೇ ದಾಳಿಯಾಗಿದೆ.