ಕೊಲ್ಹಾಪುರ(ಮಹಾರಾಷ್ಟ್ರ): ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿರುವ ಮಹಾರಾಷ್ಟ್ರದ ಮಾಜಿ ಸಚಿವ ಹಸನ್ ಮುಶ್ರಿಫ್ಗೆ ಇಂದು ಬೆಳ್ಳಂಬೆಳಗ್ಗೆ ಐಟಿ ಮತ್ತು ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇಂದು ಬೆಳಗ್ಗೆ 6 ಗಂಟೆಗೆ ಅವರ ನಿವಾಸ ಸೇರಿದಂತೆ ಹಲವು ಜಾಗಗಳ ಮೇಲೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಗಿಭದ್ರತೆಯ ನಡುವೆ ಜಂಟಿ ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದ ಮಾಜಿ ಸಚಿವರ ವಿರುದ್ಧ ಬಿಜೆಪಿ ಭ್ರಷ್ಟಾಚಾರ ಆರೋಪ ಮಾಡಿದ ಬೆನ್ನಲ್ಲೇ ಇಡಿ ದಾಳಿ ನಡೆಸಿದೆ. ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ಸೇರಿ ನಡೆಸಿದ್ದ ಮಹಾ ವಿಕಾಸ್ ಅಘಾಡಿ ಸರ್ಕಾರದ ಅವಧಿಯಲ್ಲಿ ಸಕ್ಕರೆ ಇಲಾಖೆ ಸಚಿವರಾಗಿದ್ದ ಹಸನ್ ಮುಶ್ರಿಫ್ 158 ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ನಡೆಸಿದ್ದಾರೆ. ಇದರಿಂದಾಗಿ ಮಾಜಿ ಸಚಿವ ಅಪಾರವಾದ ಆಸ್ತಿಯನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಸಕ್ಕರೆ ಕಾರ್ಖಾನೆಗಳಲ್ಲಿ ನಡೆದ ಕೋಟ್ಯಂತರ ರೂಪಾಯಿ ಹಗರಣದ ಪ್ರಕರಣ ದಾಖಲಿಸಿಕೊಂಡ ಇಡಿ, ಐಟಿ ಇಂದು ದಾಳಿ ನಡೆಸಿವೆ. ಸುಮಾರು ಎರಡು ಡಜನ್ಗೂ ಅಧಿಕ ಅಧಿಕಾರಿಗಳು ಏಕಕಾಲಕ್ಕೆ ಕಾಗಲ್ ಪಟ್ಟಣ ಮತ್ತು ಇತರ ಸ್ಥಳಗಳಲ್ಲಿರುವ ಮುಶ್ರಿಫ್ ಅವರಿಗೆ ಸೇರಿದ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಹಲವು ಗಂಟೆಗಳ ಕಾರ್ಯಾಚರಣೆಯ ನಂತರ ಅವರು ಕೆಲವು ಮಹತ್ವದ ದಾಖಲೆಗಳು ಮತ್ತು ಇತರ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿಯ ಆರೋಪದ ಮೇಲೆ ಮಾಜಿ ಸಚಿವರ ಆಪ್ತರಾದ ಅನಿಲ್ ದೇಶಮುಖ್ ಮತ್ತು ನವಾಬ್ ಮಲಿಕ್ ಮನೆಗಳ ಮೇಲೆ ಐಟಿ, ಇಡಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ್ದವು. ಇದರ ವಿರುದ್ಧ ಮುಶ್ರಿಫ್ ಅವರು ಕಿಡಿಕಾರಿದ್ದರು. ಅಲ್ಲದೇ ತಮ್ಮ ಮೇಲೆ ಹೊರೆಸಲಾದ ಆರೋಪವನ್ನು ಅಲ್ಲಗಳೆದಿದ್ದರು. ಇದೀಗ ಎನ್‌ಸಿಪಿ ನಾಯಕನ ಮೇಲೆಯೇ ತನಿಖಾ ಸಂಸ್ಥೆಗಳು ದಾಳಿ ಮಾಡಿವೆ.
ದಾಳಿ ಸುದ್ದಿ ತಿಳಿದ ಮಾಜಿ ಸಚಿವ ಮುಶ್ರಿಫ್ ಅವರ ಬೆಂಬಲಿಗರು, ಎನ್‌ಸಿಪಿ ಕಾರ್ಯಕರ್ತರು ಅವರ ಮನೆಯ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆಗಳನ್ನು ನಡೆಸಿದರು. ಬಿಜೆಪಿ ಮತ್ತು ತನಿಖಾ ಸಂಸ್ಥೆಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರ ನಡುವೆ ಸಚಿವರ ಮೇಲೆ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಆರೋಪ ಮಾಡಿವ ಬಿಜೆಪಿಯ ನಾಯಕ ಸೋಮಯ್ಯ ಅವರು ಕೊಲ್ಹಾಪುರಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಓದಿ: ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ಗುಣಮಟ್ಟದ ಪರೀಕ್ಷೆಗೆ ಐಐಎಸ್ಸಿಗೆ ಮನವಿ