ಮುಂಬೈ: ಪನ್ವೆಲ್ ಮೂಲದ ಸಹಕಾರಿ ಬ್ಯಾಂಕಿನಲ್ಲಿ 512 ಕೋಟಿ ರೂ.ಗಳ ವಂಚನೆಗೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಶಾಸಕ ವಿವೇಕಾನಂದ್ ಎಸ್. ಪಾಟೀಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 8.15ರ ಸುಮಾರಿಗೆ ಪನ್ವೇಲ್ ಸಮೀಪದ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದಲ್ಲಿ ಅವರನ್ನು ಪ್ರಕರಣದ ಕುರಿತು ವಿಚಾರಣೆ ನಡೆಸಿದ ನಂತರ ಬಂಧಿಸಲಾಗಿದೆ.
ರೈತರು ಮತ್ತು ಕಾರ್ಮಿಕರ ಪಕ್ಷಕ್ಕೆ (Peasants and Workers Party) ಸೇರಿದ ಮಾಜಿ ಶಾಸಕ ವಿವೇಕಾನಂದ್ ಪಾಟೀಲ್ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದ್ದು, ಹೆಚ್ಚಿನ ಕಸ್ಟಡಿಗಾಗಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆಯಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ನವಿ ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು (ಇಒಡಬ್ಲ್ಯೂ) ಕರ್ನಾಲಾ ನಗರಿ ಸಹಕಾರಿ ಬ್ಯಾಂಕ್ನಲ್ಲಿ 512.54 ಕೋಟಿ ರೂ.ಗಳಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ ದಾಖಲಿಸಿದ ಎಫ್‌ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ ಮಾಜಿ ಶಾಸಕರನ್ನು ವಿಚಾರಣೆಗೆ ಒಳಪಡಿಸಿತ್ತು. ಈ ಸಹಕಾರಿ ಬ್ಯಾಂಕ್ ರಾಯಗಡ್ ಜಿಲ್ಲೆಯ ಪನ್ವೇಲ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.
ಇದನ್ನೂ ಓದಿ: ಭಾರತದಲ್ಲಿ ಕಾನೂನು ರಕ್ಷಣೆ ಕಳೆದುಕೊಂಡ ಬೆನ್ನಲ್ಲೇ ಕಾನೂನಿಗೆ ಮಣಿಯುತ್ತೇನೆಂದ ಟ್ವಿಟರ್
ಈ ಹಿಂದೆ ಪನ್ವೇಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪಾಟೀಲ್ ಈ ಸಹಕಾರಿ ಬ್ಯಾಂಕ್ನ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಇವರೊಂದಿಗೆ ಬ್ಯಾಂಕ್ನ ಉಪಾಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಂಸ್ಥೆಯಿಂದ ಸಾಲ ಪಡೆದ ಹಲವಾರು ಮಂದಿಯನ್ನು ಆರೋಪಿಗಳೆಂದು ಪೊಲೀಸರು ಹೆಸರಿಸಿದ್ದರು. ಭಾರತೀಯ ರಿಸರ್ವ್ ಬ್ಯಾಂಕ್ ಲೆಕ್ಕಪತ್ರಗಳ ಪರಿಶೀಲನೆ ನಡೆದ ನಂತರ ಬ್ಯಾಂಕಿನ 17 ಶಾಖೆಗಳಲ್ಲಿ ಅಕ್ರಮ ನಡೆದಿರುವುದು ಬಹಿರಂಗವಾಗಿದೆ.