ನವದೆಹಲಿ: ತಮ್ಮ ಸೇವಾ ಅವಧಿ ಪೂರ್ಣಗೊಂಡಿದ್ದರೂ ಪಶ್ಚಿಮ ಬಂಗಾಳ ಮಹಾನಗರ ಪಾಲಿಕೆಗಳ ಆಡಳಿತಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ರಾಜಕಾರಣಿಗಳು ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವವರೆಗೂ ತಮ್ಮ ಅಧಿಕಾರ ಚಲಾಯಿಸುವಂತಿಲ್ಲ ಎಂದು ಭಾರತದ ಚುನಾವಣಾ ಆಯೋಗ (ಇಸಿಐ) ನಿರ್ಬಂಧಿಸಿ ಆದೇಶ ನೀಡಿದೆ.
ಶಾಸಕರು, ಸಚಿವರು, ಸಂಸದರು ಹೀಗೆ ಕೆಲ ರಾಜಕಾರಣಿಗಳನ್ನು ಪಾಲಿಕೆಗಳ ಅಧಿಕಾರಿಗಳಾಗಿ ನೇಮಕ ಮಾಡಲಾಗಿರುತ್ತದೆ. ಕೆಲವರು ತಮ್ಮ ಅವಧಿ ಮುಗಿದಿದ್ದರೂ ಪಾಲಿಕೆಗಳಲ್ಲಿ ಸೇವೆ ಮುಂದುವರೆಸಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ನಗರ ಸ್ಥಳೀಯ ಸಂಸ್ಥೆಗಳು ಕಟ್ಟುನಿಟ್ಟಾಗಿ ಕರ್ತವ್ಯ ಸಲ್ಲಿಸಬೇಕಿದೆ. ಚುನಾವಣೆ ಸಮಯದಲ್ಲಿ ನ್ಯಾಯ ಮತ್ತು ನಿಷ್ಪಕ್ಷಪಾತದ ಬಗ್ಗೆ ಮತದಾರರ ಮನಸ್ಸಿನಲ್ಲಿ ಯಾವುದೇ ಅನುಮಾನಗಳು ಮೂಡದಿರಲಿ, ಯಾವುದೇ ಸಮಸ್ಯೆಗಳು ಹುಟ್ಟದಿರಲಿ ಎಂಬ ಕಾರಣಕ್ಕೆ ಈ ನಿರ್ಬಂಧ ಹೇರಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದನ್ನೂ ಓದಿ: ಕೋಲ್ಕತ್ತಾ ಪಾಲಿಕೆ ಅಧ್ಯಕ್ಷ ಸ್ಥಾನಕ್ಕೆ ಟಿಎಂಸಿ ಮುಖಂಡ ರಾಜೀನಾಮೆ
ಇಸಿಐ ಆದೇಶದ ಹೊರಡಿಸಿದ ಬೆನ್ನಲ್ಲೇ ಪಶ್ಚಿಮ ಬಂಗಾಳ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡ ಫಿರ್ಹಾದ್ ಹಕೀಮ್ ಅವರು ತಮ್ಮ ಕೋಲ್ಕತ್ತಾ ಮಹಾನಗರ ಪಾಲಿಕೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಮಾರ್ಚ್ 27 ರಿಂದ ಏಪ್ರಿಲ್ 29ರ ವರೆಗೆ ಎಂಟು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.