ನವದೆಹಲಿ: ಮೂರು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಪರಿಷಥ್ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಇದೇ ತಿಂಗಳ ಜನವರಿ 28ರಂದು ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಕೂಡ ಹೊರಬೀಳಲಿದೆ.
ಆಂಧ್ರಪ್ರದೇಶ, ಬಿಹಾರ ಹಾಗೂ ಉತ್ತರಪ್ರದೇಶದಲ್ಲಿ ಕೆಲವೊಂದು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಆಂಧ್ರಪ್ರದೇಶದ ಒಂದು ಕ್ಷೇತ್ರ, ಬಿಹಾರದ ಎರಡು ಕ್ಷೇತ್ರ ಹಾಗೂ ಉತ್ತರ ಪ್ರದೇಶದ 12 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಓದಿ: ರೈತರ ವಿರುದ್ಧ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣ ಹಿಂತೆಗೆತ; ಪಂಜಾಬ್ ಸಿಎಂ ಆದೇಶ
ಬಿಹಾರದಲ್ಲಿ ಸುಶೀಲ್ ಕುಮಾರ್ ಮೋದಿ ಹಾಗೂ ವಿನೋದ್ ನಾರಾಯಣ್ ಜಾ ರಾಜೀನಾಮೆ ನೀಡಿರುವುದರಿಂದ ಸ್ಥಾನಗಳು ತೆರವಾಗಿವೆ. ಕೋವಿಡ್ ಮಾರ್ಗಸೂಚಿ ಗಮನದಲ್ಲಿಟ್ಟುಕೊಂಡು ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗದ ಸೆಕ್ರೆಟರಿ ಮಾಹಿತಿ ನೀಡಿದ್ದಾರೆ.
ನಾಮಪತ್ರ ಸಲ್ಲಿಕೆ ಮಾಡಲು ಜನವರಿ 18 ಕೊನೆಯ ದಿನವಾಗಿದ್ದು, ಮರಳಿ ಪಡೆಯಲು ಜನವರಿ 21 ಕೊನೆಯ ದಿನವಾಗಿದೆ. ಚುನಾವಣೆ ಜನವರಿ 28ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ನಡೆಯಲಿದ್ದು, 5 ಗಂಟೆಯಿಂದ ಮತ ಎಣಿಕೆ ಆರಂಭಗೊಳ್ಳಲಿದೆ.