ನವದೆಹಲಿ: ದೇಶದ ಕೆಲ ಭಾಗಗಳಲ್ಲಿ ಶುಕ್ರವಾರ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ರಿಕ್ಟರ್ ಮಾಪಕದಲ್ಲಿ ಶೇ.4.0ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದರೆ, ಛತ್ತೀಸ್‌ಗಢದ ಅಂಬಿಕಾಪುರ ಮತ್ತು ಮಣಿಪುರದ ಮೊಯಿರಾಂಗ್‌ನಲ್ಲಿ ರಿಕ್ಟರ್ ಮಾಪಕದಲ್ಲಿ ಶೇ.3.9ರಷ್ಟು ತೀವ್ರತೆಯ ಭೂಕಂಪ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ.
ಎನ್ಸಿಎಸ್ ಮಾಹಿತಿ ಪ್ರಕಾರ, ಛತ್ತೀಸ್‌ಗಢದ ಅಂಬಿಕಾಪುರದಲ್ಲಿ ಬೆಳಗ್ಗೆ 10.28ಕ್ಕೆ ಭೂಕಂಪನವಾಗಿದೆ. ಅಂಬಿಕಾಪುರದ 12 ಕಿಮೀ ದೂರದಲ್ಲಿ 10 ಕಿಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ.3.9ರಷ್ಟು ತೀವ್ರತೆಯ ಕಂಪನ ಘಟಿಸಿದೆ. ಅದೇ ರೀತಿಯಾಗಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬೆಳಗ್ಗೆ 10.31ಕ್ಕೆ ಭೂಕಂಪ ಸಂಭವಿಸಿದೆ. ಇಲ್ಲಿ 28 ಕಿಮೀ ದೂರದಲ್ಲಿ 28 ಕಿಮೀ ಆಳದಲ್ಲಿ ಭೂಕಂಪ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ ಶೇ.4.0ರಷ್ಟು ತೀವ್ರತೆಯ ಭೂಕಂಪ ದಾಖಲಾಗಿದೆ. ಅಲ್ಲದೇ, ಗುರುವಾರ ಸಂಜೆ ಮಣಿಪುರದಲ್ಲಿ ಮೊಯಿರಾಂಗ್‌ನಲ್ಲೂ ರಿಕ್ಟರ್ ಮಾಪಕದಲ್ಲಿ ಶೇ.3.9ರಷ್ಟು ತೀವ್ರತೆಯ ಭೂಕಂಪ ದಾಖಲಾಗಿದೆ. ಮೊಯಿರಾಂಗ್‌ನ 31 ದೂರದಲ್ಲಿ 51 ಕಿಮೀ ಆಳದಲ್ಲಿ ಕಂಪನ ಘಟಿಸಿದೆ ಎಂದು ಭೂಕಂಪಶಾಸ್ತ್ರ ಕೇಂದ್ರವು ಟ್ವೀಟ್ ಮಾಡಿದೆ.
ಮನೆಯಿಂದ ಹೊರಬಂದ ಜನರು: ಛತ್ತೀಸ್‌ಗಢದ ಅಂಬಿಕಾಪುರದಲ್ಲಿ ಭೂಕಂಪನದ ಭಯದಿಂದ ಜನರು ತಮ್ಮ ಮನೆಗಳಿಂದ ಹೊರ ಓಡಿ ಬಂದಿದ್ದಾರೆ. ಈ ಕಂಪನ ಎಷ್ಟು ಪ್ರಬಲವಾಗಿತ್ತು ಎಂದರೆ ಮನೆಯಲ್ಲಿ ಪೀಠೋಪಕರಣಗಳು ಕೂಡ ಅಲುಗಾಡಲು ಆರಂಭಿಸಿದ್ದವು. ಸುಮಾರು 7 ಸೆಕೆಂಡುಗಳ ಕಾಲ ಭೂಮಿ ಕಂಪಿಸುತ್ತಲೇ ಇತ್ತು ಎಂದು ಸ್ಥಳೀಯರು ತಿಳಿದ್ದಾರೆ.
ಈ ಭೂಕಂಪದ ಕೇಂದ್ರಬಿಂದು ಅಂಬಿಕಾಪುರದಿಂದ 10 ಕಿಮೀ ದೂರದಲ್ಲಿರುವ ಸೂರಜ್‌ಪುರ ಜಿಲ್ಲೆಯ ಭಟ್‌ಗಾಂವ್‌ನಲ್ಲಿದೆ ಎನ್ನಲಾಗಿದೆ. ಬೆಳಗ್ಗೆ 10.28ಕ್ಕೆ ಭೂಕಂಪನದ ಅನುಭವವಾಗಿದೆ. ಇದು ಇಡೀ ಉತ್ತರ ಛತ್ತೀಸ್‌ಗಢದಲ್ಲಿ ತನ್ನ ಪರಿಣಾಮವನ್ನು ಬೀರಿತ್ತು. ಇದರಲ್ಲೂ, ಸುರ್ಗುಜಾ ಮತ್ತು ಸೂರಜ್‌ಪುರ ಜಿಲ್ಲೆಗಳಲ್ಲಿ ಭೂಕಂಪದ ತೀವ್ರತೆಯು ಹೆಚ್ಚು ಅನುಭವವಾಗಿದೆ.
ಜುಲೈನಿಂದ ನಾಲ್ಕನೇ ಭೂಕಂಪ: ಛತ್ತೀಸ್‌ಗಢದ ಸೂರಜ್‌ಪುರ ಮತ್ತು ಅಂಬಿಕಾಪುರದ ಸುತ್ತ-ಮುತ್ತ ಕಳೆದ ಜುಲೈನಿಂದ ನಾಲ್ಕನೇ ಬಾರಿ ಸಂಭವಿಸುತ್ತಿರುವ ಭೂಕಂಪನ ಇದಾಗಿದೆ. ಜುಲೈ 11ರಂದು ಕೊರಿಯಾ ಜಿಲ್ಲೆಯಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇಷ್ಟೇ ಅಲ್ಲ, ಅದೇ ತಿಂಗಳು ಜುಲೈ 24ರಂದು ಇದೇ ಕೊರಿಯಾದಲ್ಲಿ 4.6 ತೀವ್ರತೆಯ ಭೂಕಂಪ ಉಂಟಾಗಿತ್ತು. ಆಗಸ್ಟ್ 4ರಂದು ಸೂರಜ್‌ಪುರ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದೀಗ ಮತ್ತೆ ಇದೇ ರೀತಿಯ ಭೂಕಂಪ ಉಂಟಾಗಿದೆ.
ದೆಹಲಿ ಸುತ್ತ-ಮುತ್ತಲೂ ಕಂಪನ: ಇದೇ ಮಾರ್ಚ್ 21 ಮತ್ತು 20ರಂದು ರಾಷ್ಟ್ರ ರಾಜಧಾನಿ ದೆಹಲಿ ಸಮೀಪ ಭೂಮಿ ಕಂಪಿಸಿದ ಅನುಭವ ಉಂಟಾಗಿತ್ತು. ಮಂಗಳವಾರ ಅಫ್ಘಾನಿಸ್ತಾನದ ಹಿಂಡುಕುಶ್ ಪ್ರದೇಶದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ದೆಹಲಿ - ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿತ್ತು. ದೆಹಲಿ, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಭೂಮಿ ನಡುಗಿತ್ತು. ಅಲ್ಲದೇ, ಬುಧವಾರ ದೆಹಲಿಯ ಪಶ್ಚಿಮ ವಾಯುವ್ಯದ 17 ಕಿ.ಮೀ ದೂರದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ.2.7ರಷ್ಟು ತೀವ್ರತೆಯ ಭೂಕಂಪ ದಾಖಲಾಗಿತ್ತು.
ಇದನ್ನೂ ಓದಿ: ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಕಂಪನ: ವಿಡಿಯೋ