ಜಮ್ಮು: ಇಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಪೊದೆಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತವಾಗಿದ್ದ ಯಂತ್ರದ ಮೇಲೆ ಪಾಕಿಸ್ತಾನದ ರೇಂಜರ್ಸ್ ಗುಂಡು ಹಾರಿಸಿದೆ. ನಾಲ್ಕು ತಿಂಗಳಲ್ಲಿ ಇದು ಎರಡನೇ ಕದನ ವಿರಾಮ ಉಲ್ಲಂಘನೆಯಾಗಿದೆ ಎಂದು ತಿಳಿದು ಬಂದಿದೆ. ಗಡಿ ಭದ್ರತಾ ಪಡೆ ಈ ಘಟನೆಯನ್ನು ಖಚಿತಪಡಿಸಿಲ್ಲ, ನಿರಾಕರಿಸಿಯೂ ಇಲ್ಲ.
ಬೆಳಗ್ಗೆ 8.15ರ ಸುಮಾರಿಗೆ ಜಮ್ಮುವಿನ ಹೊರವಲಯದ ಅರ್ನಿಯಾ ಸೆಕ್ಟರ್‌ನ ವಿಕ್ರಮ್ ಪೋಸ್ಟ್ ಪ್ರದೇಶದಲ್ಲಿ ಪೊದೆಗಳನ್ನು ಸ್ವಚ್ಛಗೊಳಿಸುತ್ತಿದ್ದ ಬುಲೆಟ್ ಪ್ರೂಫ್ ಜೆಸಿಬಿ ಯಂತ್ರದ ಮೇಲೆ ಪಾಕಿಸ್ತಾನಿ ರೇಂಜರ್ಸ್ ಕೆಲವು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಾವುದೇ ಪ್ರಾಣ ಹಾನಿಯ ಬಗ್ಗೆ ವರದಿಯಾಗಿಲ್ಲ. ಪ್ರತೀಕಾರವಾಗಿ ಬಿಎಸ್ಎಫ್ ಕೂಡ ಕೆಲ ಸುತ್ತು ಗುಂಡು ಹಾರಿಸಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ತಿಳಿದು ಬಂದಿದೆ.
ಕದನ ವಿರಾಮವನ್ನು ಬಲಪಡಿಸುವ ಒಪ್ಪಂದಕ್ಕೆ ಈ ವರ್ಷ ಫೆಬ್ರವರಿಗೆ 25ರಂದು ಉಭಯ ದೇಶಗಳು ಸಹಿ ಹಾಕಿದ್ದವು. ಇದಾದ ನಂತರ ಮೇ 2ರಂದು ಮೊದಲ ಬಾರಿಗೆ ಸಾಂಬಾ ಜಿಲ್ಲೆಯ ರಾಮ್ಗಢ ಸೆಕ್ಟರ್ನಲ್ಲಿ ಪಾಕ್ನ ರೇಂಜರ್ಸ್ ಗುಂಡಿನ ದಾಳಿ ಮಾಡುವ ಮೂಲಕ ಕದನ ವಿರಾಮ ಉಲ್ಲಂಘಿಸಿತ್ತು. ಕಳೆದ ತಿಂಗಳು ಇಬ್ಬರು ಪಾಕ್ ನುಸುಳುಕೋರರನ್ನು ಬಿಎಸ್ಎಫ್ ಹೊಡೆದು ಹಾಕಿತ್ತು.