ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ ತೀವ್ರ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಚಳಿಗಾಲದ ಶಾಲಾ ರಜೆಯನ್ನು ಮುಂಚಿತವಾಗಿಯೇ ಪರಿಷ್ಕರಿಸಲಾಗಿದೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ನವೆಂಬರ್ 9 ರಿಂದ 18ರ ವರೆಗೆ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಇಂದು ಆದೇಶ ಹೊರಡಿಸಿದೆ.
ಉಸಿರಾಟದ ಮೇಲೆ ಪರಿಣಾಮ ಬೀರಲಿರುವ ಕೆಟ್ಟ ಗಾಳಿಯಿಂದಾಗಿ ಈ ಹಿಂದೆ ನವೆಂಬರ್ 3 ರಿಂದ ನವೆಂಬರ್ 10ರ ವರೆಗೆ ಶಾಲೆಗಳಿಗೆ ಸರ್ಕಾರ ರಜೆ ನೀಡಿತ್ತು. ಇನ್ನೂ ಪರಿಸ್ಥಿತಿ ಸುಧಾರಿಸದ ಕಾರಣ ವಿರಾಮ ದಿನಗಳನ್ನು ಮತ್ತಷ್ಟು ದಿನಗಳಿಗೆ ವಿಸ್ತರಿಸಿದೆ.
ಸುತ್ತೋಲೆಯಲ್ಲಿ ಏನಿದೆ?: ನಗರದಲ್ಲಿ ಸದ್ಯ ವಾಯು ಗುಣಮಟ್ಟ ತೀವ್ರ ಕಲುಷಿತವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಶಾಲೆಗಳಿಗೆ 2023-24 ರ ಚಳಿಗಾಲದ ವಿರಾಮವನ್ನು ಮುಂಚಿತವಾಗಿಯೇ ಘೋಷಿಸಲಾಗಿದೆ. ನಿಗದಿತ ದಿನಾಂಕದವರೆಗೂ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚಬಹುದು. ಮಕ್ಕಳು ಮತ್ತು ಶಿಕ್ಷಕರು ಮನೆಯಲ್ಲಿಯೇ ಪಾಠಾಭ್ಯಾಸ ಮಾಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ದೆಹಲಿ ಮತ್ತು ಅದರ ಉಪನಗರಗಳಲ್ಲಿನ ಗಾಳಿಯ ಗುಣಮಟ್ಟವು ಬುಧವಾರ ಬೆಳಗ್ಗೆ ಮತ್ತೆ ಕೆಳಹಂತಕ್ಕೆ ಇಳಿದಿದೆ. ನೆರೆಯ ರಾಜ್ಯಗಳಾದ ಪಂಜಾಬ್, ಹರಿಯಾಣದಲ್ಲಿ ಕೃಷಿ ತ್ಯಾಜ್ಯವನ್ನು ಸುಡುವ ಕಾರಣ ಹೊಗೆಯು ರಾಷ್ಟ್ರ ರಾಜಧಾನಿಯಲ್ಲಿನ ವಾಯುಮಾಲಿನ್ಯವನ್ನು ಕಲುಷಿತ ಮಾಡಿದೆ. ಗಾಳಿತ ಮೂರನೇ ಒಂದು ಭಾಗವನ್ನು ಅದು ಆವರಿಸಿಕೊಂಡಿದೆ.
ವಿವಿಧ ನಗರಗಳಲ್ಲಿ ವಾಯುಸ್ಥಿತಿ: ನಗರದ ವಾಯು ಗುಣಮಟ್ಟ ಸೂಚ್ಯಂಕವು ಮಂಗಳವಾರ ಸಂಜೆ 4 ಗಂಟೆಗೆ 395 ರಿಂದ 421 ಕ್ಕೆ ಕುಸಿದಿತ್ತು. ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿದ ಪ್ರತಿ ಘನ ಮೀಟರ್‌ಗೆ 15 ಮೈಕ್ರೋಗ್ರಾಂಗಳ ಆರೋಗ್ಯಕರ ಮಿತಿಗಿಂತ 30 ರಿಂದ 40 ಪಟ್ಟು ಇದು ಅಪಾಯಕಾರಿಯಾಗಿದೆ. ಇಂಡೋ-ಗಂಗಾ ಬಯಲು ಪ್ರದೇಶದ ಹಲವಾರು ನಗರಗಳಲ್ಲಿನ ಗಾಳಿಯ ಗುಣಮಟ್ಟವು ಅಪಾಯಕಾರಿ ಮಟ್ಟಕ್ಕೆ ಇಳಿದಿದೆ. ಗಾಜಿಯಾಬಾದ್ (382), ಗುರುಗ್ರಾಮ್ (370), ನೋಯ್ಡಾ (348), ಗ್ರೇಟರ್ ನೋಯ್ಡಾ (474), ಮತ್ತು ಫರಿದಾಬಾದ್ (396)ನಲ್ಲಿ ಗಾಳಿಯ ಗುಣಮಟ್ಟ ತೀರಾ ಕಲುಷಿತವಾಗಿದೆ.
ತ್ಯಾಜ್ಯ ಸುಟ್ಟ ಹೊಗೆಯೊಂದೇ ಕಾರಣವಲ್ಲ: ಚಳಿಗಾಲದ ಆರಂಭದಲ್ಲೇ (ನವೆಂಬರ್ 2ರಂದು) ದೆಹಲಿ ಮಾಲಿನ್ಯ ಮಟ್ಟವು ಪಿಎಂ2.5 ಸಾಂದ್ರತೆ ತಲುಪಿದ್ದು, ವಾಯುಗುಣಮಟ್ಟ ಕುಸಿಯುತ್ತಿದೆ. ಇದಕ್ಕೆ ಕೃಷಿ ತ್ಯಾಜ್ಯ ಸುಡುವ ಮೂಲಕ ಬರುವ ಹೊಗೆಯೊಂದೇ ಕಾರಣವಲ್ಲ ಎಂದು ಪರಿಸರ ವಿಜ್ಞಾನ ಕೇಂದ್ರ (ಸಿಎಸ್ಇ) ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
ವಾಯುಗುಣಮಟ್ಟ ಸೂಚ್ಯಂಕ (ಎಕ್ಯೂಐ) ಸಾಂದ್ರತೆಯ ಶ್ರೇಣಿಯ ಪ್ರಕಾರ ದೆಹಲಿಯಲ್ಲಿ ಕಳಪೆ ವಾಯು ಗುಣಮಟ್ಟವಿದೆ. ಗಾಳಿಯ ಹದಗೆಡುವಿಕೆಗೆ ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ ಮಾತ್ರ ಕಾರಣವಾಗುತ್ತಿಲ್ಲ. ವಾಹನದ ಹೊಗೆ ಸೇರಿದಂತೆ ಇತರ ಹಲವು ಅಂಶಗಳು ಗಾಳಿ ವಿಷಪೂರಿತವಾಗಲು ಪ್ರಮುಖ ಕಾರಣ ಎಂದು ವರದಿ ವಿವರಿಸಿದೆ.
ಇದನ್ನೂ ಓದಿ: ದೆಹಲಿ ವಾಯುಗುಣಮಟ್ಟ ಕಳಪೆ: ಕೃಷಿ ತ್ಯಾಜ್ಯ ಸುಡುವಿಕೆ ಮಾತ್ರ ಕಾರಣವಲ್ಲ- ಸಿಎಸ್ಇ ವರದಿ