ಟೋಕಿಯೊ: ಭಾರತದ ಓಟಗಾರ್ತಿ ದುತಿ ಚಾಂದ್ ಟೋಕಿಯೋ ಒಲಿಂಪಿಕ್ನಲ್ಲಿ ನಡೆದ ಟ್ರ್ಯಾಕ್ 2ರ ಮಹಿಳಾ ವಿಭಾಗದ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ಸೆಮಿಫೈನಲ್ ಅರ್ಹತೆ ಗಿಟ್ಟಿಸಲು ಸಾಧ್ಯವಾಗಲಿಲ್ಲ.
ಟ್ರ್ಯಾಕ್ 4ರಲ್ಲಿ ಓಡಿದ ದುತಿ 23.85 ಸೆಕೆಂಡ್ನಲ್ಲಿ ಓಟ ಮುಗಿಸಿ 7ನೇ ಸ್ಥಾನ ಪಡೆದರು. ನಮೀಬಿಯಾದ ಕ್ರಿಸ್ಟೀನ್ ಎಂಬೋಮಾ 22.11 ಸೆಕೆಂಡ್ನಲ್ಲಿ ಓಟ ಮುಗಿಸಿ ಅಗ್ರಸ್ಥಾನ ಅಲಂಕರಿಸಿದರು. ಯುಎಸ್ಎನ ಗೇಬ್ರಿಯಲ್ ಥಾಮಸ್ 22.20 ಸೆಕೆಂಡ್ ಸಮಯದಲ್ಲಿ ಓಡಿ ಎರಡನೇ ಸ್ಥಾನ ಪಡೆದಿದ್ದಾರೆ.
ದುತಿ ಚಾಂದ್ ಬಗ್ಗೆ..
ದುತಿ ಚಾಂದ್ ಭಾರತದ ಭರವಸೆಯ ಓಟಗಾರ್ತಿ. ಇವರು ಒಡಿಶಾದ ಜೈಪುರ್ ಜಿಲ್ಲೆಯ ಗೋಪಾಲ್ಪುರದವರು. 2013ರಲ್ಲಿ ಪುಣೆಯಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ 200 ಮೀಟರ್ ಮಹಿಳೆಯರ ವಿಭಾಗದಲ್ಲಿ 23.81 ಸೆಕೆಂಡುಗಳಲ್ಲಿ ಕ್ರಮಿಸಿ ಕಂಚಿನ ಪದಕ ಪಡೆದಿದ್ದರು. ಈ ಬಳಿಕ ದೇಶಾದ್ಯಂತ ಇವರು ಚಿರಪರಿಚಿತರಾದರು.
ದೆಹಲಿಯಲ್ಲಿ ನಡೆದ 2016ರ ಫೆಡರೇಷನ್ ಕಪ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 100 ಮೀಟರನ್ನು 11.33 ಸೆಕೆಂಡುಗಳಲ್ಲಿ ಮುಗಿಸಿ, 16 ವರ್ಷದ ಹಿಂದೆ ರಚಿತ ಮಿಸ್ತ್ರಿ ಎಂಬವರು ಮಾಡಿದ್ದ 11.38 ಸೆಕೆಂಡುಗಳ ರಾಷ್ಟ್ರೀಯ ದಾಖಲೆ ಮುರಿದರು. ಆದರೆ ಬಳಿಕ ಅವರು ರಿಯೊ ಒಲಿಂಪಿಕ್ಸ್-2016ರ ಅರ್ಹತೆ ಸಮಯವಾದ 11.32 ಸೆಕೆಂಡುಗಳನ್ನು ಪೂರೈಸಲು ಅಶಕ್ತರಾಗಿ, ಆ ವೇಳೆ ಅವಕಾಶವನ್ನು ತಪ್ಪಿಸಿಕೊಂಡರು.