ಅಮೃತಸರ(ಪಂಜಾಬ್) : ಪಂಜಾಬ್ ಪ್ರಾಂತ್ಯದ ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿರುವ ಸುಂದರ್ಗಢ ಎಂಬಲ್ಲಿ ಮಂಗಳವಾರ ರಾತ್ರಿ ಪಾಕಿಸ್ತಾನದ ಡ್ರೋನ್ ಪತ್ತೆಯಾಗಿದೆ. ಬಿಎಸ್ಎಫ್ ಯೋಧರು ಅದನ್ನು ಹೊಡೆದುರುಳಿಸಲು ಯತ್ನಿಸಿದ ಘಟನೆಯೂ ನಡೆದಿದೆ.
ಮಂಗಳವಾರ ರಾತ್ರಿ ವೇಳೆ ಪಾಕಿಸ್ತಾನದ ಡ್ರೋನ್ ಒಂದು ಅನುಮಾನಾಸ್ಪದವಾಗಿ ಭಾರತದ ಗಡಿಪ್ರದೇಶದಲ್ಲಿ ಹಾರಾಡುತ್ತಿದ್ದುದನ್ನು ಗುರುತಿಸಿದ ಗಡಿ ಭದ್ರತಾ ಪಡೆ(ಬಿಎಸ್ಎಫ್) ಯೋಧರು ಅದರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಈ ವೇಳೆ ಡ್ರೋನ್ ಪಾಕಿಸ್ತಾನದ ಗಡಿಯೊಳಗೆ ಹಾರಿ ಹೋಗಿದೆ.
ಬಳಿಕ, ಡ್ರೋನ್ ಮೂಲಕ ಪಾಕಿಸ್ತಾನ, ಭಾರತದ ಭೂಪ್ರದೇಶದೊಳಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಬೀಳಿಸಿದೆಯೇ ಎಂದು ಬಿಎಸ್ಎಫ್ ಯೋಧರು ಮತ್ತು ಭದ್ರತಾ ಸಂಸ್ಥೆ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆಯೂ ಹಲವಾರು ಬಾರಿ ಪಾಕಿಸ್ತಾನದ ಡ್ರೋನ್ಗಳು ಭಾರತದ ಗಡಿಯಲ್ಲಿ ಅನುಮಾನಾಸ್ಪದವಾಗಿ ಹಾರಾಟ ನಡೆಸಿದ್ದವು.
ಇತ್ತೀಚೆಗೆ ಪಾಕಿಸ್ತಾನ ಡ್ರೋನ್ಗಳ ಮೂಲಕ ಅಕ್ರಮವಾಗಿ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದೆ. ಮಂಗಳವಾರ ರಾತ್ರಿ ಡ್ರೋನ್ ಪತ್ತೆಯಾದ ಕಾರಣ ಗಡಿ ಪ್ರದೇಶದಲ್ಲಿ ಬಿಎಸ್ಎಫ್ ಯೋಧರು ಕಟ್ಟೆಚ್ಚರವಹಿಸಿದ್ದಾರೆ.