ಹೈದರಾಬಾದ್: ಭಾರತದಲ್ಲಿ ಕೋವಿಡ್ ಲಸಿಕೆ ಸ್ಪುಟ್ನಿಕ್ ಅನ್ನು12.5 ಕೋಟಿ ಡೋಸೇಜ್ ಮಾರಾಟ ಮಾಡಲು ರಷ್ಯಾದ ನೇರ ಹೂಡಿಕೆ ಒಪ್ಪಂದ ಮಾಡಿಕೊಂಡಿರುವ ಡಾ. ರೆಡ್ಡಿಸ್ ಲ್ಯಾಬೊರೇಟರೀಸ್, ಇದೀಗ ಇನ್ನಷ್ಟು ದೇಶಗಳಿಗೆ ಲಸಿಕೆ ಮಾರಾಟ ಮಾಡಲು ಆರ್ಡಿಐಎಫ್ನೊಂದಿಗೆ ಹಕ್ಕಿಗಾಗಿ ಮಾತುಕತೆಗೆ ಮುಂದಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರ್ಡಿಐಎಫ್ನಿಂದ ಇತ್ತೀಚಿಗೆ 2 ಲಕ್ಷ ಸ್ಪುಟ್ನಿಕ್ ಲಸಿಕೆ ಪಡೆದಿರುವ ರೆಡ್ಡಿಸ್ ಸಂಸ್ಥೆ ವಿತರಣೆಗಾಗಿ ಅಪೊಲೋ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ನಾವು ಬೇರೆ ದೇಶಗಳಲ್ಲಿ ಮಾರಾಟಕ್ಕಾಗಿ ಹಕ್ಕು ಮತ್ತು ಅನುಮತಿ ಸಂಬಂಧ ಆರ್ಡಿಐಎಫ್ನೊಂದಿಗೆ ಚರ್ಚಿಸುತ್ತಿದ್ದೇವೆ ಎಂದು ಡಾ.ರೆಡ್ಡಿಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇತ್ತೀಚಿಗೆ ನಡೆಸಿರುವ ಮಾತುಕತೆ ವೇಳೆ ಹೇಳಿದ್ದಾರೆ.
ಕೊರೊನಾ ಲಸಿಕೆಯನ್ನು ನೋಂದಾಯಿಸಿದ ವಿಶ್ವದ ಮೊದಲ ರಾಷ್ಟ್ರ ರಷ್ಯಾ ಆಗಿದ್ದು, ಸ್ಪುಟ್ನಿಕ್ ವಿ ಅಭಿವೃದ್ಧಿ ಪಡಿಸಿತ್ತು. ಬಳಿಕ ವಿಶ್ವದ ನಾನಾ ದೇಶಗಳಿಗೂ ರವಾನಿಸುವ ಕಾರ್ಯ ಮಾಡುತ್ತಿದೆ.
ಇತ್ತ ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ತುರ್ತು ಬಳಕೆಗಾಗಿ ಡಾ.ರೆಡ್ಡಿಸ್ ಸಂಸ್ಥೆ ಅನುಮೋದನೆ ಪಡೆದಿದೆ. ಇದಲ್ಲದೇ ರಷ್ಯಾದಲ್ಲಿ ಸ್ಪುಟ್ನಿಕ್ ಲೈಟ್ ಲಸಿಕೆ ಉತ್ಪಾದಿಸಲಾಗಿದ್ದು, ಇದು ಸಿಂಗಲ್ ಡೋಸ್ ಲಸಿಕೆಯಾಗಿದೆ. ಇದನ್ನೂ ಸಹ ಭಾರತದಲ್ಲಿ ಭವಿಷ್ಯದಲ್ಲಿ ಬಳಸುವ ಕುರಿತು ರೆಡ್ಡಿಸ್ ಸಂಸ್ಥೆ ರಷ್ಯಾದ ನೇರ ಹೂಡಿಕೆ ನಿಧಿಯೊಂದಿಗೆ ಮಾತುಕತೆಗೆ ಮುಂದಾಗಿದೆ.