ನವದೆಹಲಿ: ಮಹಾರಾಷ್ಟ್ರದಲ್ಲಿ ತಮ್ಮ ವಿರುದ್ಧ ದಾಖಲಾದ ಪ್ರಕರಣಗಳನ್ನು ವರ್ಗಾವಣೆ ಮಾಡಲು ಕೋರಿದ್ದ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರ ಮನವಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಲು ನಿರಾಕರಿಸಿದೆ. ಮತ್ತು ಅವರ ಮನವಿಯನ್ನು ಹಿಂತೆಗೆದುಕೊಳ್ಳಿ ಎಂದು ಸೂಚಿಸಿದೆ.
ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಮಾಡಿದ ಹಣದ ಸುಲಿಗೆ ಬಗ್ಗೆ ಮುಖ್ಯಮಂತ್ರಿಗೆ ಬರೆದ ಪತ್ರವನ್ನು ಹಿಂಪಡೆಯುವಂತೆ ತನಿಖಾ ಅಧಿಕಾರಿಯಿಂದ ಒತ್ತಡ ಹೇರಲಾಗುತ್ತಿದೆ ಎಂದು ಪರಮ್ ಬೀರ್ ಸಿಂಗ್ ಪರ ವಕೀಲ ಮಹೇಶ್ ಜೇಠ್ಮಲಾನಿ ನ್ಯಾಯಾಲಯಕ್ಕೆ ತಿಳಿಸಿದರು.
ಡಿಜಿಪಿಯಂತಹ ಹುದ್ದೆಯಲ್ಲಿರುವ ವ್ಯಕ್ತಿಯ ಮೇಲೆ ಒತ್ತಡ ಹೇರಲು ಸಾಧ್ಯವಾದರೆ, ಯಾವುದೇ ಶ್ರೇಣಿಯ ಯಾರಾದರೂ ಒತ್ತಡಕ್ಕೆ ಒಳಗಾಗಬಹುದು. ಕಥೆಗಳನ್ನು ಕಟ್ಟಬೇಡಿ" ಎಂದು ನ್ಯಾಯಮೂರ್ತಿ ಹೇಮಂತ್ ಗುಪ್ತಾ ನೇತೃತ್ವದ ನ್ಯಾಯಪೀಠ ಹೇಳಿದೆ. ನೀವು ಮಹಾರಾಷ್ಟ್ರ ಐಪಿಎಸ್ ಕೇಡರ್ನ ಭಾಗವಾಗಿದ್ದೀರಿ. ನೀವು ಮೂವತ್ತು ವರ್ಷಗಳ ಕಾಲ ರಾಜ್ಯಕ್ಕೆ ಸೇವೆ ಸಲ್ಲಿಸಿದ್ದೀರಿ ಮತ್ತು ಈಗ ನಿಮ್ಮ ಸ್ವಂತ ರಾಜ್ಯದ ಕಾರ್ಯವೈಖರಿಯನ್ನು ನೀವು ನಂಬುವುದಿಲ್ಲವೇ? ಇದು ಆಘಾತಕಾರಿ ಆರೋಪ ”ಎಂದು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹೇಳಿದ್ದಾರೆ.
ನ್ಯಾಯಾಲಯವು ತನ್ನ ಸ್ವಂತ ಪೊಲೀಸರ ಮೇಲೆ ಅನುಮಾನ ಪಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹೇಳಿದ್ದಾರೆ.' ಗಾಜಿನ ಮನೆಯಲ್ಲಿರುವ ವ್ಯಕ್ತಿಯು ಇತರರ ಮೇಲೆ ಕಲ್ಲು ಎಸೆಯಬಾರದು' ಎಂಬ ಮಾತಿದೆ ಎಂದು ನ್ಯಾ. ಗುಪ್ತಾ ಪರಮ್ ಬೀರ್ ಸಿಂಗ್ಗೆ ಉದ್ದೇಶಿಸಿ ಹೇಳಿದರು.