ಮುಂಬೈ (ಮಹಾರಾಷ್ಟ್ರ): ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯಕ್ಕೆ(ಇಡಿ) ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಜಾಗತಿಕ ಭಯೋತ್ಪಾದಕನ ಹಣೆಪಟ್ಟಿ ಹೊತ್ತಿರುವ ದಾವೂದ್ ಪಾಕಿಸ್ತಾನದ ಕರಾಚಿಯಲ್ಲೇ ನೆಲೆಸಿದ್ದಾನೆ ಎಂಬ ಸುಳಿವು ದೊರೆತಿದೆ.
ಈ ಸ್ಫೋಟಕ ಮಾಹಿತಿಯನ್ನು ಸ್ವತಃ ದಾವೂದ್ನ ಸೋದರಳಿಯ ಆಲಿಶಾ ಪಾರ್ಕರ್ ನೀಡಿದ್ದಾನೆ. ಈ ಆಲಿಶಾ ಪಾರ್ಕರ್ ದಾವೂದ್ನ ಸಹೋದರಿ ಹಸೀನಾ ಪಾರ್ಕರ್ನ ಮಗನಾಗಿದ್ದು, ಈತನನ್ನು ಅನೇಕ ಬಾರಿ ಜಾರಿ ನಿರ್ದೇಶನಾಲಯವು ವಿಚಾರಣೆಗೆ ಒಳಪಡಿಸಿದೆ.
ಈ ವೇಳೆ ದಾವೂದ್ ಬಗ್ಗೆ ಆಲಿಶಾ ಪಾರ್ಕರ್ ಬಾಯ್ಬಿಟ್ಟಿದ್ದಾನೆ. ಪಾಕಿಸ್ತಾನದ ಕರಾಚಿಯಲ್ಲಿ ದಾವೂದ್ ಇದ್ದಾನೆ. ನಾನು ಹುಟ್ಟುವ ಮುನ್ನವೇ ಆತ ಮುಂಬೈ ತೊರೆದಿದ್ದಾನೆ ಎಂದು ಸೋದರಳಿಯ ತಿಳಿಸಿದ್ದಾನೆ. ಜೊತೆಗೆ ಮುಂಬೈನ ಡಂಬರ್ವಾಲಾ ಭವನದಲ್ಲಿ 1986ರವರೆಗೆ ಆತ ವಾಸವಿದ್ದ. ಪಾಕಿಸ್ತಾನದಲ್ಲಿ ಆತ ಇದ್ದಾನೆ ಎಂದು ನಾನು ಅನೇಕ ಬಾರಿ ನಮ್ಮ ಸಂಬಂಧಿಕರ ಬಾಯಿಯಿಂದ ಕೇಳಿದ್ದೇನೆ ಎಂದು ಹೇಳಿದ್ದಾನೆ.
ಅಷ್ಟೇ ಅಲ್ಲ, ಈದ್ ಮತ್ತು ಇತರ ಹಬ್ಬದ ದಿನಗಳಲ್ಲಿ ದಾವೂದ್ ಪತ್ನಿ ಮೆಹಜಾಬೀನ್ ನಮ್ಮ ಸಂಪರ್ಕಕ್ಕೆ ಬರುತ್ತಿದ್ದರು. ನನ್ನ ಪತ್ನಿ ಆಯೇಷಾ ಹಾಗೂ ನನ್ನ ಸಹೋದರಿಯರೊಂದಿಗೆ ಸಂಕರ್ಪದಲ್ಲಿ ಇದ್ದರು ಎಂದೂ ಆಲಿಶಾ ಪಾರ್ಕರ್ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿ: ಕುರ್ಲಾ ಆಸ್ತಿಗಾಗಿ 'ಡಿ ಕಂಪನಿ' ಜೊತೆ ಸೇರಿ ನವಾಬ್ ಮಲಿಕ್ ಸಂಚಿಗೆ ಸಾಕ್ಷ್ಯ ಇದೆ : ವಿಶೇಷ ನ್ಯಾಯಾಲಯ