ಜಲೋರ್ (ರಾಜಸ್ಥಾನ): ರಾಜಸ್ಥಾನದ ಜಲೋರ್ ಜಿಲ್ಲೆಯ ಯುವಕನೊಬ್ಬನ ಹೊಟ್ಟೆಯಲ್ಲಿ 56 ಬ್ಲೇಡ್‌ಗಳು ಪತ್ತೆಯಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ಜೀವ ಉಳಿಸಿದ್ದಾರೆ. ಆದರೆ, ಇಷ್ಟೊಂದು ಸಂಖ್ಯೆಯ ಬ್ಲೇಡ್‌ಗಳನ್ನು ಈ ಯುವಕ ಯಾಕೆ ನುಂಗಿದ್ದ ಎಂಬುದು ಇನ್ನೂ ಗೊತ್ತಾಗಿಲ್ಲ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇಲ್ಲಿನ ದತ್ತ ಗ್ರಾಮದ ಯಶಪಾಲ್ ಸಿಂಗ್ ಎಂಬ ಯುವಕ ಗಂಭೀರ ಸ್ಥಿತಿಯಲ್ಲಿ ಕಳೆದ ಭಾನುವಾರ ಸಂಚೋರ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ರಕ್ತ ವಾಂತಿ ಮಾಡುತ್ತಿದ್ದ ಸಿಂಗ್ನ ಹೊಟ್ಟೆ, ತಲೆ ಮತ್ತು ಕುತ್ತಿಗೆ ಊದಿಕೊಂಡಿತ್ತು. ರೋಗಿಯನ್ನು ಆಸ್ಪತ್ರೆಗೆ ಕರೆತಂದಾಗ ಆಮ್ಲಜನಕದ ಮಟ್ಟ 80 ಆಗಿತ್ತು. ಹೀಗಾಗಿ ಪರಿಸ್ಥಿತಿ ಅರಿತ ವೈದ್ಯರು ತಕ್ಷಣವೇ ಎಕ್ಸ್ರೇ ಮಾಡಿದರು. ಇದರಿಂದ ಆತನ ಹೊಟ್ಟೆಯೊಳಗೆ ಬ್ಲೇಡ್‌ಗಳಿರುವುದು ಬೆಳಕಿಗೆ ಬಂತು ಎಂದು ಆಸ್ಪತ್ರೆಯ ವೈದ್ಯ ಡಾ.ನರಸಿರಾಮ್ ದೇವಾಸಿ ತಿಳಿಸಿದರು.
ಮೊದಲಿಗೆ ಗಂಟಲಿನಿಂದ ಬ್ಲೇಡ್‌ಗಳನ್ನು ತೆಗೆಯಲು ಪ್ರಯತ್ನಿಸಲಾಯಿತು. ಆದರೆ, ಇದು ಸಾಧ್ಯವಾಗದ ಕಾರಣ ತುರ್ತು ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಯಿತು. ಡಾ.ಪ್ರತಿಮಾ ವರ್ಮಾ, ಡಾ.ಪುಷ್ಪೇಂದ್ರ, ಡಾ.ಧವಲ್ ಶಾ, ಡಾ.ಶೀಲಾ ಬಿಷ್ಣೋಯ್, ಡಾ.ನರೇಶ್ ದೇವಾಸಿರಾಮ್ ಮತ್ತು ಡಾ.ಅಶೋಕ್ ವೈಷ್ಣವ್ ಅವರನ್ನೊಳಗೊಂಡ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ, ಎಲ್ಲ ಬ್ಲೇಡ್‌ಗಳನ್ನು ಹೊರ ತೆಗೆಯಲಾಯಿತು ಎಂದು ಮಾಹಿತಿ ನೀಡಿದರು.
ಈ ಯುವಕ ಮೂರು ಪ್ಯಾಕೆಟ್ ಬ್ಲೇಡ್‌ಗಳನ್ನು ನುಂಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕವರ್‌ಗಳು ಸಮೇತವಾಗಿ ಇವುಗಳನ್ನು ನುಂಗಿದ್ದಾನೆ. ಈ ಕವರ್‌ಗಳು ಹೊಟ್ಟೆಯೊಳಗೆ ಕರಗಿವೆ. ಪರಿಣಾಮ ಬ್ಲೇಡ್‌ಗಳು ಯುವಕನ ಕರುಳು ಮತ್ತು ಹೊಟ್ಟೆಯ ಒಳಪದರಗಳಿಗೆ ಗಾಯಗೊಳಿಸಿವೆ. ಸದ್ಯ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
ಮಾನಸಿಕ ಖಿನ್ನತೆ ಕಾರಣ?: ಯಶಪಾಲ್ ಸಿಂಗ್ ಸಂಚೋರ್ ಪಟ್ಟಣದ ಖಾಸಗಿ ಡೆವಲಪರ್‌ನಲ್ಲಿ ಕೆಲಸ ಮಾಡುತ್ತಿದ್ದ. ನಾಲ್ವರು ಯುವಕರೊಂದಿಗೆ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದ. ಭಾನುವಾರ ರೂಮ್ನಲ್ಲಿ ಒಬ್ಬಂಟಿಯಾಗಿದ್ದಾಗ ಆರೋಗ್ಯ ಹದಗೆಟ್ಟ ಬಗ್ಗೆ ತಾನೇ ಸ್ನೇಹಿತರಿಗೆ ಕರೆ ಮಾಡಿ ತಿಳಿಸಿದ್ದಾನೆ. ಇದರಿಂದ ತಕ್ಷಣವೇ ರೂಮ್ಗೆ ಆಗಮಿಸಿದ ಸ್ನೇಹಿತರು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ, ಯುವಕನ ಅನಾರೋಗ್ಯದ ಮಾಹಿತಿ ಪಡೆದು ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದ್ದಾರೆ. ಸಾಮಾನ್ಯವಾಗಿ ಯಾವುದೇ ರೋಗಿ ತೀವ್ರವಾದ ಮಾನಸಿಕ ಖಿನ್ನತೆ ಅಥವಾ ಆತಂಕದಿಂದ ಬಳಲುತ್ತಿರುವಾಗ ಅಂತಹ ವಸ್ತುಗಳನ್ನು ನುಂಗಲು ಯತ್ನಿಸುತ್ತಾನೆ. ಇದೇ ಕಾರಣದಿಂದಲೂ ಯಶಪಾಲ್ ಸಿಂಗ್ ತಾನೇ ಬ್ಲೇಡ್‌ಗಳು ನುಂಗಿರಬಹುದು. ಇದು ಆತ್ಮಹತ್ಯೆ ಪ್ರಯತ್ನವೂ ಆಗಿರಬಹುದು ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: 4 ತಿಂಗಳಿನಿಂದ ವೃದ್ಧನ ಹೊಟ್ಟೆಯೊಳಗೆ ಸಿಲುಕಿರುವ ಲೋಟ.. ಇಷ್ಟು ದಿನ ವಿಷಯ ಮುಚ್ಚಿಟ್ಟಿದ್ದು ಯಾಕೆ?
ಕಳೆದ ಕೆಲ ತಿಂಗಳ ಹಿಂದೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿ ವೃದ್ಧನೊಬ್ಬನ ಹೊಟ್ಟೆಯಲ್ಲಿ ಲೋಟ ಪತ್ತೆಯಾಗಿರುವ ಘಟನೆ ವರದಿಯಾಗಿತ್ತು. ಹೊಟ್ಟೆ ನೋವಿನಿಂದ ಈ ವೃದ್ಧ ಆಸ್ಪತ್ರೆಗೆ ದಾಖಲಾದ ಹೊಟ್ಟೆಯೊಳಗೆ ಲೋಟ ಸಿಲುಕಿರುವ ಬೆಳಕಿಗೆ ಬಂದಿತ್ತು. ನಾಲ್ಕು ತಿಂಗಳಿನಿಂದ ಈ ಲೋಟ ಹೊಟ್ಟೆಯೊಳಗೇ ಇತ್ತು ಎಂದೂ ಹೇಳಲಾಗಿತ್ತು.