ಮುಂಬೈ: ಪ್ರಸಾರ ಭಾರತಿ ತನ್ನ ಪ್ರಾದೇಶಿಕ ದೂರದರ್ಶನ ಚಾನೆಲ್ ಡಿಡಿ ಸಹ್ಯಾದ್ರಿಯಲ್ಲಿ ಮರಾಠಿ ಭಾಷೆಯ ಕಾರ್ಯಕ್ರಮಗಳನ್ನು ಮಾತ್ರ ಪ್ರಸಾರ ಮಾಡಬೇಕೆಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇಲ್ಲಿನ ದೂರದರ್ಶನ ಕಚೇರಿಯ ಹೆಚ್ಚುವರಿ ಮಹಾನಿರ್ದೇಶಕ (ಪಶ್ಚಿಮ ವಲಯ) ನೀರಜ್ ಅಗರವಾಲ್ ಅವರಿಗೆ ಬರೆದ ಪತ್ರದಲ್ಲಿ ಠಾಕ್ರೆ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

"ಮರಾಠಿ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ಬಿತ್ತರಿಸುವ ಉದ್ದೇಶದಿಂದ ಡಿಡಿ ಸಹ್ಯಾದ್ರಿ ಚಾನೆಲ್ ಅನ್ನು ಆಗಸ್ಟ್ 15, 1994 ರಂದು ಆರಂಭಿಸಲಾಗಿತ್ತು. ಆದರೆ ಈಗ ಈ ಚಾನೆಲ್ ಇತರ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಈ ಕುರಿತು ಪ್ರೇಕ್ಷಕರಲ್ಲಿ ಅಸಮಾಧಾನ ಉಂಟಾಗಿರುವುದನ್ನು ನಾವು ಗಮನಿಸಿದ್ದೇವೆ. ಸಂದರ್ಶನಗಳು ಅಥವಾ ಚರ್ಚೆಗಳಂಥ ಕಾರ್ಯಕ್ರಮಗಳಲ್ಲಿ ಅತಿಥಿಗಳು ಹಿಂದಿ ಭಾಷೆಯಲ್ಲಿ ಮಾತನಾಡಬಹುದು ಎಂಬುದು ಗಮನಕ್ಕೆ ಬಂದಿದೆ. ಇದು ಈ ಚಾನೆಲ್ನ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ"ಎಂದು ಪತ್ರದಲ್ಲಿ ಹೇಳಲಾಗಿದೆ.

"ದಯವಿಟ್ಟು ನಮ್ಮ ಮನವಿಯನ್ನು ಪರಿಗಣಿಸಿ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ, ಇಲ್ಲದಿದ್ದರೆ ಸಮಸ್ಯೆಯ ಪರಿಹಾರಕ್ಕೆ ಎಂಎನ್‌ಎಸ್ ಸ್ವತಃ ಸೂಕ್ತ ಕ್ರಮ ಕೈಗೊಳ್ಳಲಿದೆ" ಎಂದು ರಾಜ್ ಠಾಕ್ರೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಮುಖಂಡರಾದ ಬಾಳಾ ನಂದಗಾಂವ್ಕರ್, ನಿತಿನ್ ಸರ್ದೇಸಾಯಿ ಮತ್ತು ಸಂಜಯ್ ಚಿತ್ರೆ ಅವರು ದೂರದರ್ಶನದ ಹೆಚ್ಚುವರಿ ಮಹಾನಿರ್ದೇಶಕ ನೀರಜ್ ಅಗರ್ವಾಲ್ ಅವರನ್ನು ನಿನ್ನೆ 'ಪ್ರಸಾರಣ್ ಭವನ'ದಲ್ಲಿ ಭೇಟಿಯಾಗಿ ಈ ವಿಷಯದ ಬಗ್ಗೆ ವಿವರವಾಗಿ ಚರ್ಚಿಸಿದರು.
