ಕಂಗ್ರಾ (ಹಿಮಾಚಲ ಪ್ರದೇಶ): ಕಳೆದ 40,000 ವರ್ಷಗಳಿಂದ ಎಲ್ಲಾ ಭಾರತೀಯರ ಡಿಎನ್‌ಎ ಒಂದೇ ಆಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಧರ್ಮಶಾಲಾದಲ್ಲಿ ಮಾಜಿ ಸೈನಿಕರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಭಾರತೀಯರ ಪೂರ್ವಜರು ಒಂದೇ ಎಂದು ಹೇಳಿದ್ದಾರೆ. 40,000 ವರ್ಷಗಳ ಹಿಂದಿನ ಭಾರತದ ಎಲ್ಲಾ ಜನರ ಡಿಎನ್‌ಎ ಇಂದಿನ ಜನರಂತೆಯೇ ಇದೆ. ನಮ್ಮೆಲ್ಲರ ಪೂರ್ವಜರು ಒಂದೇ ಆಗಿದ್ದಾರೆ. ಆ ಪೂರ್ವಜರಿಂದ ನಮ್ಮ ದೇಶ ಪ್ರವರ್ಧಮಾನಕ್ಕೆ ಬಂದಿತು. ನಮ್ಮ ಸಂಸ್ಕೃತಿ ಮುಂದುವರೆಯಿತು ಎಂದು ವಿವರಿಸಿದ್ದಾರೆ.
ನಮ್ಮ ಸಂಘಟನೆಯನ್ನು ಮಾಧ್ಯಮಗಳು ಸರ್ಕಾರದ ರಿಮೋಟ್ ಕಂಟ್ರೋಲ್ ಎಂದು ತಪ್ಪಾಗಿ ಬಿಂಬಿಸುತ್ತಿವೆ. ಆದರೆ ಕೆಲವು ಕಾರ್ಯಕರ್ತರು ಖಂಡಿತವಾಗಿ ಸರ್ಕಾರದ ಭಾಗವಾಗಿದ್ದಾರೆ ಎಂದು ಅವರು ಹೇಳಿದರು.
ಭಾರತೀಯ ಸೇನೆಯ ಶೌರ್ಯವನ್ನು ಶ್ಲಾಘಿಸಿದ ಭಾಗವತ್, ಯಾವುದೇ ಸಂದರ್ಭಗಳನ್ನು ಲೆಕ್ಕಿಸದೆ ಭಾರತೀಯ ಸೈನಿಕರು ತಮ್ಮ ಕಾರ್ಯಾಚರಣೆಯನ್ನು ಪೂರ್ಣಗೊಳಿಸುತ್ತಾರೆ ಅಥವಾ ತಮ್ಮ ಪ್ರಾಣ ತ್ಯಾಗ ಮಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶಭಕ್ತಿ ಮತ್ತು ಶಿಸ್ತು ಸೇನೆಯ ತರಬೇತಿಯಿಂದ ನಿರ್ಣಯಿಸಲಾಗುವುದಿಲ್ಲ, ಆದರೆ ಅವುಗಳನ್ನು ಸೈನಿಕನ ಮನಸ್ಸಿನಿಂದ ನಿರ್ಣಯಿಸಲಾಗುತ್ತದೆ. ಧೈರ್ಯ ಮತ್ತು ಶಕ್ತಿಯ ವಿಷಯಕ್ಕೆ ಬಂದರೆ ಭಾರತೀಯ ಸೈನಿಕರು ವಿಶ್ವದಲ್ಲೇ ಅತ್ಯುತ್ತಮರು. ಭಾರತ ಮಾತೆ ನಿಜವಾಗಿಯೂ ನಮ್ಮ ತಾಯಿ, ಅವರು ನಮಗೆ ತಿನ್ನಲು ಆಹಾರವನ್ನು ನೀಡುವುದು ಮಾತ್ರವಲ್ಲದೆ ನಮಗೆ ಸಂಸ್ಕಾರವನ್ನೂ ನೀಡುತ್ತಾರೆ ಎಂದು ಭಾಗವತ್ ಹೇಳಿದರು.
ಇದೇ ವೇಳೆ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಇತರ 13 ಮಂದಿಯ ಸ್ಮರಣಾರ್ಥ ಒಂದು ನಿಮಿಷ ಮೌನ ಆಚರಿಸಿದರು.
ಇದನ್ನೂ ಓದಿ: ದೇಶದಲ್ಲಿ ವಿರೋಧ ವ್ಯಕ್ತಪಡಿಸುವ ಧ್ವನಿಗಳು ಬಿಜೆಪಿ ಸೋಲಿಸಲು ಒಂದಾಗುತ್ತವೆ : ಶಶಿ ತರೂರ್