ನವದೆಹಲಿ: ಡಿಎಂಕೆ ಸಂಸದರು ಸೋಮವಾರ ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ಕಠಿಣ ಮಸೂದೆಗಳನ್ನು ಬುಲ್ಡೋಜಿಂಗ್ ಮಾಡುವುದರ("bulldozing the draconian bills") ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಕಪ್ಪು ಶರ್ಟ್ ಧರಿಸಿದ್ದರು. ಸಂಸತ್ತಿನ ಮುಂಗಾರು ಅಧಿವೇಶನವು ಅಂತಿಮ ವಾರಕ್ಕೆ ಕಾಲಿಟ್ಟಾಗಲೂ, ಕೆಲವು ಪ್ರಮುಖ ಮಸೂದೆಗಳು ಪ್ರತಿಪಕ್ಷಗಳ ನಿರಂತರ ವಿರೋಧದ ನಡುವೆಯೂ ಇಂದು ಸದನದಲ್ಲಿ ಅಂಗೀಕರಿಸಲ್ಪಟ್ಟವು.
ಮಾಧ್ಯಮಗಳನ್ನು ಉದ್ದೇಶಿಸಿ ಡಿಎಂಕೆ ಸಂಸದ ತಿರುಚಿ ಶಿವ, ರೈತರ ಸಮಸ್ಯೆ, ಬೆಲೆ ಏರಿಕೆ ಮತ್ತು ಪೆಗಾಸಸ್ ಸ್ನೂಪಿಂಗ್ ಬಗ್ಗೆ ಚರ್ಚೆಗೆ ವಿರೋಧ ಪಕ್ಷಗಳು ಬೇಡಿಕೆ ಇಟ್ಟಿದ್ದರೂ, ಸರ್ಕಾರವು ಈ ಬೇಡಿಕೆಗಳನ್ನು ಸ್ವೀಕರಿಸಲು ಸಿದ್ಧವಿಲ್ಲ. ಸರ್ಕಾರ ಹೆಚ್ಚಿನ ಮಸೂದೆಗಳನ್ನು ಅಂಗೀಕರಿಸುವುದರಲ್ಲಿಯೇ ನಿರತವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ನಮ್ಮ ಬೇಡಿಕೆಗಳನ್ನು ಸ್ವೀಕರಿಸಲಾಗುತ್ತಿಲ್ಲ. ಆದ್ದರಿಂದ ಇಂದು ಡಿಎಂಕೆ ರಾಜ್ಯಸಭಾ ಸಂಸದರು ಕಪ್ಪು ಉಡುಪಿನಲ್ಲಿ ಬಂದಿದ್ದಾರೆ. ಮಸೂದೆಗಳನ್ನು ಚರ್ಚಿಸಲು ಮತ್ತು ನಂತರ ಸರಿಯಾದ ರೀತಿಯಲ್ಲಿ ಅಂಗೀಕರಿಸಲು ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಡಿಎಂಕೆ ಸಂಸದರು ಭರವಸೆ ನೀಡಿದರು. ಸೋಮವಾರ, ವಿರೋಧ ಪಕ್ಷದ ಸಂಸದರ ಘೋಷಣೆಯ ನಡುವೆಯೂ, ಲೋಕಸಭೆಯು ಸಂವಿಧಾನ ತಿದ್ದುಪಡಿ ಮಸೂದೆ 2021, ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಮಸೂದೆ 2021 ಮತ್ತು ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (ತಿದ್ದುಪಡಿ) ಮಸೂದೆ, 2021 ಅನ್ನು ಅಂಗೀಕರಿಸಿತು.
ರಾಜ್ಯಸಭೆಯಲ್ಲಿ, ನ್ಯಾಯಮಂಡಳಿ ಸುಧಾರಣಾ ಮಸೂದೆ ಅಂಗೀಕರಿಸಲ್ಪಟ್ಟಾಗ, ವಿರೋಧ ಪಕ್ಷದ ಸದಸ್ಯರು ಮಸೂದೆಯನ್ನು ಸ್ಥಾಯಿ ಸಮಿತಿಗೆ ಕಳುಹಿಸಲು ಮುಂದಾದರು, ಆದರೆ ಮತದಾನದಲ್ಲಿ ಸೋತರು. ಹೀಗಾಗಿ ಡಿಎಂಕೆ ಸಂಸದರು ಕಪ್ಪು ಬಟ್ಟೆ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಹರಿಹಾಯ್ದರು.