ಮೀರತ್(ಉತ್ತರ ಪ್ರದೇಶ): ಮೀರತ್ ಜಿಲ್ಲೆಯ ಈದ್ಗಾ ಪ್ರದೇಶದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪದ ಮೇಲೆ ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಷ್ಟ್ರಗೀತೆ ಮೊಳಗುವ ವೇಳೆ ಮೂವರು ಯುವಕರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತನಿಖೆಯ ವೇಳೆ, ಅವರಲ್ಲಿ ಇಬ್ಬರನ್ನು ಅದ್ನಾನ್ ಮತ್ತು ರುಹಾಲ್ ಎಂದು ಗುರುತಿಸಲಾಗಿದೆ ಎಂದು ಮೀರತ್ ಸಿಟಿ ಎಸ್ಪಿ ಪಿಯೂಷ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, 'ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವೈರಲ್ ವೀಡಿಯೊವನ್ನು ಗಮನದಲ್ಲಿಟ್ಟುಕೊಂಡು ಆರೋಪಿಗಳ ವಿರುದ್ಧ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನಗರದ ಈದ್ಗಾ ಬಡಾವಣೆಯ ಇಬ್ಬರು ಯುವಕರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ವಿಚಾರಣೆ ನಂತರ ಪ್ರಮುಖ ಆರೋಪಿಗಳಾದ ಅದ್ನಾನ್ ಮತ್ತು ರುಹುಲ್ ಇಬ್ಬರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ತಿಳಿಸಿದ್ದಾರೆ.
ಏನಿದೆ ವಿಡಿಯೋದಲ್ಲಿ?: ಮೀರತ್‌ನ ರೈಲ್ವೆ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. 29 ಸೆಕೆಂಡುಗಳ ವೀಡಿಯೊದಲ್ಲಿ, ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಹಿನ್ನೆಲೆಯಲ್ಲಿ ರಾಷ್ಟ್ರಗೀತೆ ಮೊಳಗುತ್ತಿದೆ. ಯುವಕರು ರಾಷ್ಟ್ರಗೀತೆಯನ್ನು ಗೇಲಿ ಮಾಡುತ್ತಿರುವುದು ಕಂಡುಬಂದಿದೆ. ಕಪ್ಪು ಜಾಕೆಟ್ ಮತ್ತು ಜೀನ್ಸ್ ಧರಿಸಿದ್ದ ಯುವಕನೊಬ್ಬ ಪ್ರಾರಂಭದಲ್ಲಿ ಸೆಲ್ಯೂಟ್ ಸಲ್ಲಿಸಿ ರಾಷ್ಟ್ರಗೀತೆ ಹಾಡುತ್ತಿದ್ದಾನೆ. ಸ್ವಲ್ಪ ನಂತರ ಯುವಕನು ಅಶ್ಲೀಲವಾಗಿ ನೃತ್ಯ ಮಾಡುತ್ತಿದ್ದಾನೆ.
ಡ್ಯಾನ್ಸ್ ಮಾಡುವವನ ಹಿಂದೆ ಮತ್ತೊಬ್ಬ ಯುವಕ ನಿಂತಿದ್ದು, ಈ ಕೃತ್ಯಕ್ಕೆ ಅವರೂ ನಗುತ್ತಿರುವುದನ್ನೂ ವಿಡಿಯೋದಲ್ಲಿ ಗಮನಿಸಬಹುದು. ಯುವಕರ ಈ ಚೇಷ್ಟೆಗಳ ವಿಡಿಯೋ ಶೂಟ್ ಮಾಡಿದ ಮತ್ತೊಬ್ಬ ವ್ಯಕ್ತಿಯೂ ನಗುತ್ತಿರುವುದು ಕೇಳಿ ಬರುತ್ತಿದೆ. ಹಿನ್ನೆಲೆಯಲ್ಲಿ ನಗುವಿನ ಶಬ್ದಗಳೂ ಕೇಳಿಬರುತ್ತಿವೆ. ಟೆರೇಸ್‌ನಲ್ಲಿದ್ದ ಇತರ ಜನರು ಈ ಯುವಕರ ನೃತ್ಯವನ್ನು ನೋಡಿ ನಗಾಡಿದ್ದಾರೆ.
ಹಿಂದೂ ಜಾಗರಣ ಮಂಚ್‌ನ ಮಾಜಿ ನಗರಾಧ್ಯಕ್ಷ ಸಚಿನ್ ಸಿರೋಹಿ ಮಾತನಾಡಿ, 'ಇದು ರಾಷ್ಟ್ರಗೀತೆಗೆ ಮಾಡಿದ ಅವಮಾನವಾಗಿದ್ದು, ಆರೋಪಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು' ಎಂದು ಒತ್ತಾಯಿಸಿದ್ದಾರೆ. ಈ ವಿಡಿಯೋದಲ್ಲಿ ಕಂಡು ಬರುವ ಯುವಕರನ್ನು ಶೀಘ್ರ ಬಂಧಿಸುವಂತೆ ಸಿರೋಹಿ ರೈಲ್ವೇ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಅಲ್ಲದೆ ಯುವಕರ ವಿರುದ್ಧ ದೇಶದ್ರೋಹದ ಮೊಕದ್ದಮೆ ಹೂಡುವಂತೆ ಮನವಿ ಮಾಡಿದ್ದಾರೆ.
ವಿಡಿಯೋದಲ್ಲಿ, ಮನೆಯ ಟೆರೇಸ್ ಮೇಲೆ ನಿಂತಿರುವ ಇಬ್ಬರು ಯುವಕರು ಗಣರಾಜ್ಯೋತ್ಸವ ಆಚರಿಸುತ್ತಿದ್ದರು. ಇಬ್ಬರು ಯುವಕರಲ್ಲಿ ಒಬ್ಬ ಅದ್ನಾನ್ ಎನ್ನುವ ಯುವಕ ಹಿನ್ನೆಲೆಯಲ್ಲಿ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಸೆಲ್ಯೂಟ್ ಮಾಡುವ ಭಂಗಿಯಲ್ಲಿ ಕಾಣಿಸಿಕೊಂಡಿದ್ದಾನೆ. ವಿಡಿಯೊದಲ್ಲಿ, ಕೆಲವು ಜೂಕ್ ಬಾಕ್ಸ್‌ಗಳನ್ನು ಸಹ ಇರಿಸಲಾಗಿತ್ತು. ರಾಷ್ಟ್ರಗೀತೆಯ ಕೆಲವು ಸಾಲುಗಳನ್ನು ಹೇಳಿದ ನಂತರ ಆರೋಪಿ ನೃತ್ಯ ಮಾಡಲು ಪ್ರಾರಂಭಿಸಿದ್ದಾನೆ. ಆರೋಪಿ ರಾಷ್ಟ್ರಗೀತೆಯ ಕೆಲವು ಸಾಲುಗಳಾಗುತ್ತಿದ್ದಂತೆ, ನಿಂತಲ್ಲಿಯೇ ಕಾಲುಗಳನ್ನು ಅಲುಗಾಡಿಸಲು ಪ್ರಾರಂಭಿಸಿದ್ದಾನೆ. ಅವನ ಪಕ್ಕದಲ್ಲೇ ನಿಂತಿದ್ದ ಇತರ ಯುವಕರು ಈತನ ಹಾಸ್ಯಭರಿತ ಹಾವಭಾವ, ವರ್ತನೆಯನ್ನು ನೋಡಿ ನಗಲು ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಯುಪಿಯಲ್ಲಿ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಶಿಕ್ಷಕ: ಸೂಕ್ತ ತನಿಖೆಗೆ ಆದೇಶ