ಮುಂಬೈ( ಮಹಾರಾಷ್ಟ್ರ): ದಿಶಾ ಸಾಲಿಯಾನ್ ಸಾವಿನ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಮೇಲೆ ಗಂಭೀರ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಸಿಎಂ ಏಕನಾಥ ಶಿಂದೆ ಬಣ ಸಾಲಿಯಾನ ಪ್ರಕರಣದಲ್ಲಿ ಆದಿತ್ಯ ಕೈವಾಡ ಇದೆ ಎಂದು ಆರೋಪಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಶಿಂದೆ ಗುಂಪು ಮತ್ತು ಬಿಜೆಪಿ ಆರೋಪಗಳಿಗೆ ಕಾನೂನಾತ್ಮಕ ಹೋರಾಟ ಹಾಗೂ ಉತ್ತರ ನೀಡಲು ಆದಿತ್ಯ ಠಾಕ್ರೆ ಸಿದ್ಧತೆ ಆರಂಭಿಸಿದ್ದಾರೆ. ಶಿವಸೇನಾ ನಾಯಕರೂ ಆಗಿರುವ ಶಾಸಕ ಆದಿತ್ಯ ಠಾಕ್ರೆ ವಿರುದ್ಧ ಶಿಂದೆ ಬಣ ಮತ್ತು ಬಿಜೆಪಿ ನಾಯಕರು ಗುರುತರ ಆರೋಪ ಹೊರಿಸಿದ್ದಾರೆ. ದಿಶಾ ಕೊಲೆ ಪ್ರಕರಣದಲ್ಲಿ ಆದಿತ್ಯ ಠಾಕ್ರೆ ಪಾತ್ರ ಇರುವ ಬಗ್ಗೆ ಹಾಗೂ ರಿಯಾ ಚಕ್ರವರ್ತಿ ಅವರ ಫೋನ್ಗೆ AU ಎಂಬ ಹೆಸರಿನಿಂದ 44 ಫೋನ್ ಕರೆಗಳು ಬಂದಿದ್ದು, ಆ ದೂರವಾಣಿ ಕರೆಗಳು ಆದಿತ್ಯ ಠಾಕ್ರೆ ಅವರದ್ದೇ ಆಗಿದೆ ಎಂದು ಶಿಂದೆ ಗುಂಪು ಆರೋಪಿಸಿದೆ.
ಬಿಜೆಪಿ ಹಾಗೂ ಶಿಂದೆ ಬಣದ ಗುಂಪಿನ ಆರೋಪದ ಹಿನ್ನೆಲೆಯಲ್ಲಿ ಆದಿತ್ಯ ಠಾಕ್ರೆ ಅವರು ಕಾನೂನು ಹೋರಾಟದ ಮೂಲಕ ಉತ್ತರ ನೀಡಲು ಸನ್ನದ್ದರಾಗಿದ್ದಾರೆ. ದಿಶಾ ಕೊಲೆ ಪ್ರಕರಣದಲ್ಲಿ ತಮ್ಮ ಪಾತ್ರ ಇಲ್ಲ ಎಂಬುದನ್ನು ತೋರಿಸಲು ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ, ದಿಶಾ ಸಾಲಿಯಾನ್ ಪ್ರಕರಣದಲ್ಲಿ ಆದಿತ್ಯ ಠಾಕ್ರೆ ಪಾತ್ರ ಇದೆ ಎಂದು ಆರೋಪಿಸಿರುವ ಬಿಜೆಪಿ ಈ ವಿಚಾರವನ್ನು ಸಂಸತ್ತು ಮತ್ತು ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದೆ.
ಈ ಆರೋಪಗಳಿಗೆ ಕಾನೂನಾತ್ಮಕ ಉತ್ತರ ನೀಡಲು ಠಾಕ್ರೆ ನ್ಯಾಯಾಲಯದ ಮೊರೆ ಹೋಗಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರು ಈ ಬಗ್ಗೆ ಎಸ್‌ಐಟಿ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ಸಿಬಿಐ ಸುತ್ತೋಲೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲ ಆರೋಪಗಳಿಗೆ ಕಾನೂನಾತ್ಮಕ ಉತ್ತರ ನೀಡಲು ಆದಿತ್ಯ ಠಾಕ್ರೆ ಸಿದ್ಧತೆ ನಡೆಸಿದ್ದಾರೆ.
ಇದನ್ನು ಓದಿ: ಶ್ರದ್ದಾ ವಾಕರ್ ಹತ್ಯೆ ಆತಂಕದಿಂದ ತುನಿಶಾಳಿಂದ ಬಲವಂತವಾಗಿ ಬೇರ್ಪಟ್ಟೆ: ಶೀಝಾನ್ ಖಾನ್