ತಿರುಪತಿ (ಆಂಧ್ರಪ್ರದೇಶ): ತಿರುಮಲವೇ ಹನುಮ ಜನ್ಮಸ್ಥಳ ಎಂದು ಟಿಟಿಡಿ ತೆಗೆದುಕೊಂಡಿದ್ದ ನಿರ್ಧಾರವನ್ನು ಒಪ್ಪದ ಪಂಪಾ ಕ್ಷೇತ್ರ ಕಿಷ್ಕಿಂಧ ಟ್ರಸ್ಟ್, ಇದು ಕೇವಲ ಟಿಟಿಡಿ ಪಂಡಿತರ ಸಮಿತಿ ತೆಗೆದುಕೊಂಡ ನಿರ್ಧಾರ. ಇದನ್ನು ಅಧಿಕಾರಿಗಳ ನಿರ್ಧಾರವನ್ನಾಗಿ ಮಾತ್ರ ನಾವು ಪರಿಗಣಿಸಿದ್ದೇವೆ ಎಂದು ಹನುಮಾನ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸ್ಥಾಪಕ ಟ್ರಸ್ಟಿ ಗೋವಿಂದಾನಂದ ಸರಸ್ವತಿ ಹೇಳಿದ್ದಾರೆ.
ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ವೇದಿಕೆಯಾಗಿ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ, ಟಿಟಿಡಿ ಪಂಡಿತ ಕಮಿಟಿ ಪರವಾಗಿ ಸಂಸ್ಕೃತ ವಿದ್ಯಾಪೀಠ್ ಉಪಕುಲಪತಿ ಮುರಳೀಧರ್ ಶರ್ಮಾ, ಎಸ್‌ವಿ ವೇದ ವಿಶ್ವವಿದ್ಯಾಲಯದ ವಿ.ಸಿ.ಸನಿಧನಂ ಸುದರ್ಶನ ಶರ್ಮಾ, ಟಿಟಿಡಿ ಥಿಯೋಲಾಜಿಕಲ್ ಇನ್ಸ್ಟಿಟ್ಯೂಟ್ ಯೋಜನಾ ನಿರ್ದೇಶಕ ಅಕೆಲ್ಲಾ ವಿಭೀಷಣ ಶರ್ಮಾ ಭಾಗವಹಿಸಿದ್ದರು. ಇನ್ನೂ ಪಂಪಕ್ಷೇತ್ರ ಕಿಷ್ಕಿಂದ ಸಾಮ್ರಾಜ್ಯದ ಪರವಾಗಿ ಹಂಪಿಯ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸ್ಥಾಪಕ ಟ್ರಸ್ಟಿ ಗೋವಿಂದಾನಂದ ಸರಸ್ವತಿ ಶ್ರೀ ಭಾಗವಹಿಸಿದ್ದರು.
ಸಭೆ ಬಳಿಕ ಮಾತನಾಡಿದ ಗೋವಿಂದಾನಂದ ಸರಸ್ವತಿ, ಕೊನೆಗೆ ಉಭಯ ಕಡೆಯವರ ನಡುವಿನ ದೀರ್ಘಕಾಲದ ಮಾತುಕತೆ ಅಸಂಪೂರ್ಣವಾಗಿ ಕೊನೆಗೊಂಡಿದೆ. ಇತರರು ಏನು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಟಿಟಿಡಿ ಪಂಡಿತರ ಸಮಿತಿ ಇಲ್ಲ. ಇಲ್ಲಿನ ದೈವಿಕ ನಿರ್ಣಯಗಳನ್ನು ತೆಗೆದುಕೊಳ್ಳುವುದು ತಿರುಮಲ ಪೆದ್ದಜಿಯಾರ್ ಸ್ವಾಮೀಜಿ ಅವರ ಸಮ್ಮುಖದಲ್ಲಿ. ಆದರೆ ಸಭೆಯಲ್ಲಿ ಅವರೇ ಇಲ್ಲ. ಕಾಂಚಿ ಕಾಮಕೋಟಿ ಪೀಠ, ಶೃಂಗೇರಿ ಪೀಠ, ಮಾಧ್ವಾಚಾರ್ಯ ಪರಂಪರೆ ಇದ್ದಾಗ, ಟಿಟಿಡಿ ಪಂಡಿತ ಸಮಿತಿ ಏಕೆ ಇಂತಹ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂಬುದೇ ಇವರಿಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.
ಟಿಟಿಡಿ ಪಂಡಿತ ಸಮಿತಿಗೆ ಯಾವುದೇ ಪ್ರಾಮಾಣಿಕತೆ ಇಲ್ಲ. ಪಂಡಿತ ಸಮಿತಿಯ ನಿರ್ಧಾರಕ್ಕೆ ಸ್ಪಂದಿಸಲು ಶೃಂಗೇರಿ ಶಂಕರಾಚಾರ್ಯ, ಕಾಂಚಿಕಮಕೋಟಿ ಶಂಕರ ಮಠ, ಮಾಧ್ವಾಚಾರ್ಯ ಮತ್ತು ತಿರುಮಲ ಜಿಯಾರ್ ಸ್ವಾಮಿ ಅವರನ್ನು ಭೇಟಿ ಮಾಡುವುದಾಗಿ ಹೇಳಿದರು. ತಿರುಮಲ ಪವಿತ್ರವಾದ ಸ್ಥಳ, ಹಾಗಂತ ಅನಗತ್ಯ ಹೇಳಿಕೆಗಳನ್ನು ನೀಡಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಇದು ಟಿಟಿಡಿ ಅಧಿಕಾರಿಗಳು ತೆಗೆದುಕೊಂಡ ಅಭಿಪ್ರಾಯ ಎಂದೇ ನಾವು ಭಾವಿಸುತ್ತೇವೆ. ಇದಕ್ಕೂ ಜಿಯಾರ್ ಸ್ವಾಮಿಗಳಿಗೂ ಯಾವುದೇ ಸಂಬಂಧವಿಲ್ಲ. ಟಿಟಿಡಿಯವರ ವಾದಗಳು ಸಾಮಾನ್ಯ ಜನರನ್ನು ಗೊಂದಲಕ್ಕೀಡುಮಾಡುವಂತಿವೆ. ಹನುಮನ ಜನ್ಮ ತಿಥಿ ಕೇಳಿದರೇ ಮೂರು ತಿಥಿಗಳಿವೆ ಎಂದ ಟಿಟಿಡಿ ವಾದವನ್ನು ಗೋವಿಂದಾನಂದ ಸರಸ್ವತಿ ಅಲ್ಲಗೆಳೆದರು.
ಜನ್ಮ ತಿಥಿ ವಿಷಯದಲ್ಲಿ ಬಿನ್ನಾಭಿಪ್ರಾಯ
ಇನ್ನು ಟಿಟಿಡಿ ಪಂಡಿತ ಕಮಿಟಿ ಪರವಾಗಿ ಸಂಸ್ಕೃತ ವಿದ್ಯಾಪೀಠ್ ಉಪಕುಲಪತಿ ಮುರಳೀಧರ್ ಶರ್ಮಾ ಮಾತನಾಡಿ, ಪುರಾಣಗಳ ಪ್ರಕಾರ ಹನುಮ ಜನ್ಮ ತಿರುಮಲದಲ್ಲಿ ಆಗಿದೆ. ಮತಂಗ ಮುನಿಯ ಸೂಚನೆ ಮೇರೆಗೆ ಅಂಜನಾದೇವಿ ಇಲ್ಲಿ ತಪ್ಪಸ್ಸು ಮಾಡಿದ್ದ ವೇಳೆ ವಾಯುದೇವನ ಕಟಾಕ್ಷದಿಂದ ಹನುಮನ ಜನ್ಮವಾಗಿದೆ ಎಂದರು.
ಹನುಮನ ಜನ್ಮ ತಿಥಿ ವಿಷಯದಲ್ಲಿ ಗೋವಿಂದಾನಂದ ಸರಸ್ವತಿಯವರಿಗೆ ಬಿನ್ನಾಭಿಪ್ರಾಯಗಳಿವೆ. ಪೌರಾಣಿಕ ಸಂಪ್ರದಾಯದಲ್ಲಿ ಒಂದೊಂದು ಯುಗದಲ್ಲಿ ಒಂದೊಂದು ತಿಥಿ ಬರುತ್ತದೆ. ಸ್ವಾಮಿಗಳಿಗೆ ಪುರಾಣಗಳಲ್ಲಿ ನಂಬಿಕೆ ಇಲ್ಲ. ವೇದಗಳ ಆಧಾರದಲ್ಲಿ ಅವರು ಮಾತನಾಡುತ್ತಿದ್ದಾರೆ. ಆದರೆ ವೇದಗಳಲ್ಲಿ ನಿಖರ ಮಾಹಿತಿ ಸಿಗದಿದ್ದಾಗ ಪುರಾಣಗಳ ಸಹಾಯ ಪಡೆಯುತ್ತಾರೆ. ಹಾಗಾಗಿ ಪುರಾಣಗಳ ಆಧಾರದ ಮೇಲೆ ನಾವು ಹನುಮ ಜನ್ಮ ಸ್ಥಳವನ್ನು ಗುರ್ತಿಸಿದ್ದೇವೆ ಎಂದರು.