ಲಖನೌ(ಉತ್ತರ ಪ್ರದೇಶ): ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೋಸ್ಕರ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಭರ್ಜರಿ ತಯಾರಿ ನಡೆಸಿದ್ದಾರೆ. ಅವರಿಗೆ ಪತ್ನಿ ಡಿಂಪಲ್ ಯಾದವ್ ಕೂಡ ಸಾಥ್ ನೀಡಿದ್ದು, ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಸರ್ಕಾರ ರಚನೆ ಮಾಡುವ ಕನಸು ಕಾಣುತ್ತಿದ್ದಾರೆ.
ಆದರೆ, ಉತ್ತರ ಪ್ರದೇಶ ರಾಜಕೀಯದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಡಿಂಪಲ್ ಯಾದವ್, ರಾಜ್ಯದ ಜನತೆಗೆ ತಮ್ಮ ಸರಳತೆಯಿಂದಲೇ ಅಚ್ಚುಮೆಚ್ಚು. ಹೆಚ್ಚಾಗಿ ಪುಸ್ತಕ ಓದಲು ಇಷ್ಟಪಡುವ ಇವರು ಆದರ್ಶ ಮಹಿಳೆಯರ ಸಾಲುನಲ್ಲಿ ಗುರುತಿಸಿಕೊಂಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಯಾದವ್ ಕುಟುಂಬದ ಹಿರಿಯ ಸೊಸೆಯ ಬಗ್ಗೆ ಒಂದಿಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ.
1978ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಭಾರತೀಯ ಸೇನೆಯ ನಿವೃತ್ತ ಕರ್ನಲ್ ಆರ್ಎಸ್ ರಾವತ್ ಹಾಗೂ ಚಂಪಾ ರಾವತ್ ಅವರ ಪುತ್ರಿಯಾಗಿ ಜನಸಿದ ಡಿಂಪಲ್, ಆರಂಭದ ಶಿಕ್ಷಣ ಲಖನೌ ಸೇನಾ ಶಾಲೆಯಲ್ಲಿ ಪಡೆದುಕೊಂಡರು. ತದನಂತರ 1993ರಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿ, 1995ರಲ್ಲಿ ಸೇನಾ ಶಾಲೆಯಲ್ಲೇ 12ನೇ ತರಗತಿ ಶಿಕ್ಷಣ ಪಡೆದುಕೊಳ್ಳುತ್ತಾರೆ. 1998ರಲ್ಲಿ ಲಖನೌ ವಿಶ್ವವಿದ್ಯಾಲಯದಿಂದ ಬಿಕಾಂ ಪದವಿ ಪಡೆದ ನಂತರ ಬಟಿಂಡಾ, ಪುಣೆ ಮತ್ತು ಅಂಡಮಾನ್ & ನಿಕೋಬಾರ್ ದ್ವೀಪಗಳಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆಂಬ ಮಾಹಿತಿ ಇದೆ.

ಬಾಲ್ಯದಿಂದಲೂ ಪುಸ್ತಕ ಓದುವ ಹವ್ಯಾಸ ಹೊಂದಿರುವ ಡಿಂಪಲ್ ಮನೆಯಲ್ಲೇ ಪುಟ್ಟ ಗ್ರಂಥಾಲಯವಿದೆ. ಇಲ್ಲಿ ಅನೇಕ ವಿಧದ ಪುಸ್ತಕಗಳಿವೆ. ಪುಸ್ತಕ ಓದುವ ಹವ್ಯಾಸದ ಜೊತೆಗೆ ಚಿತ್ರಕಲೆ ಮೇಲೂ ಆಸಕ್ತಿ ಹೊಂದಿರುವ ಇವರು ಕೆಲವೊಮ್ಮೆ ಪೇಂಟಿಂಗ್ ಸಹ ಮಾಡ್ತಿರುತ್ತಾರೆ. ಇದಲ್ಲದೇ ಕುದುರೆ ಸವಾರಿ ಎಂದರೆ ಡಿಂಪಲ್ಗೆ ಇಷ್ಟ.
ಇದನ್ನೂ ಓದಿರಿ: ಮೋದಿ, ನಟಿ ಪ್ರಿಯಾಂಕಾ, ಸೋನಿಯಾ, ಅಮಿತ್ ಶಾ ಕೋವಿಡ್ ವ್ಯಾಕ್ಸಿನ್ ಪಡೆದಿದ್ದು ಈ ಕೇಂದ್ರದಲ್ಲೇ!?
ನೆಚ್ಚಿನ ರಾಜಕಾರಣಿಗಳ ಪೈಕಿ ರಾಮ್ ಮನೋಹರ್ ಲೋಹಿಯಾ ತುಂಬಾ ಇಷ್ಟವಾಗಿದ್ದು, ಅವರ ಸಿದ್ಧಾಂತದ ಬಗ್ಗೆ ಹೆಚ್ಚಿನ ಒಲವು ಇಟ್ಟುಕೊಂಡಿದ್ದಾರೆ. ಡಿಂಪಲ್ ಕುಟುಂಬ ಸೇನಾ ಹಿನ್ನೆಲೆಯಿಂದ ಬಂದಿರುವ ಕಾರಣ ಸರಳತೆ ಹಾಗೂ ಶಿಸ್ತು ಜೀವನದಲ್ಲಿ ಪ್ರಮುಖ ಪಾತ್ರ ಪಡೆದುಕೊಂಡಿದೆ. ಯಾವುದೇ ಪರಿಸ್ಥಿತಿಯಲ್ಲಿ ವಿಚಲಿತಳಾಗದ ಇವರು, ಪ್ರತಿ ಸನ್ನಿವೇಶದಲ್ಲಿ ಆತ್ಮವಿಶ್ವಾಸದಿಂದ ಇರುತ್ತಾರೆ.

ದೊಡ್ಡ ರಾಜಕೀಯ ಮನೆಗೆ ಸೊಸೆಯಾಗಿ ಹೋಗಿರುವ ಡಿಂಪಲ್, ಅಲ್ಲೂ ಕೂಡ ಸೀರೆ ಉಟ್ಟು ಸರಳತೆಯಿಂದ ಇರುತ್ತಾರೆ. ಫ್ಯಾಷನ್ ಹಾಗೂ ಮೇಕಪ್ನಿಂದ ದೂರು ಉಳಿಯುವ ಇವರು ಭಾರತೀಯ ಸಂಪ್ರದಾಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿ ಉತ್ತರ ಪ್ರದೇಶದ ಜನರಲ್ಲಿ ಡಿಂಪಲ್ ಆದರ್ಶ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಾರೆ.