ಧನ್ಬಾದ್ (ಜಾರ್ಖಂಡ್): ಧನ್ಬಾದ್ ನ್ಯಾಯಾಧೀಶರ ಕೊಲೆ ಪ್ರಕರಣದ ಸಂಚುಕೋರರ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಸಿಬಿಐ (ಕೇಂದ್ರ ತನಿಖಾ ದಳ) ತಿಳಿಸಿದೆ.
ಜುಲೈ 28 ರ ಮುಂಜಾನೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಜಾಗಿಂಗ್ಗೆ ಹೋಗಿದ್ದಾಗ ಹಿಂಬದಿಯಿಂದ ಆಟೋವೊಂದು ಡಿಕ್ಕಿ ಹೊಡೆದಿದ್ದು, ಚಾಲಕ ಪರಾರಿಯಾಗಿದ್ದ. ಸ್ಥಳೀಯರು, ಗಾಯಾಳು ನ್ಯಾಯಾಧೀಶರನ್ನು ಆಸ್ಪತ್ರೆಗೆ ಸಾಗಿಸಿದ್ರೂ, ಬದುಕುಳಿಯಲಿಲ್ಲ. ಈ ಕೊಲೆ ಪ್ರಕರಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಜಾರ್ಖಂಡ್ ಪೊಲೀಸರು ಆಟೋ ಚಾಲಕ ಲಖನ್ ವರ್ಮಾನನ್ನು ಬಂಧಿಸಿದ್ದರು. ಸದ್ಯ ಈ ಪ್ರಕರಣವು ಸಿಬಿಐಗೆ ವರ್ಗಾವಣೆಯಾಗಿದೆ. ಆರೋಪಿಯನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: Judge Death Case: ಆಟೋ ಚಾಲಕ ಅರೆಸ್ಟ್.. ಸಾವಿನ ಸುತ್ತ ಅನುಮಾನಗಳ ಹುತ್ತ
ಮಾಜಿ ಶಾಸಕ ಸಂಜೀವ್ ಸಿಂಗ್ ಆಪ್ತರಾಗಿದ್ದ ಮಾಫಿಯಾ ರಂಜಯ್ ಸಿಂಗ್ ಅವರ ಕೊಲೆ ಪ್ರಕರಣವನ್ನು ನ್ಯಾ. ಆನಂದ್ ವಿಚಾರಣೆ ನಡೆಸುತ್ತಿದ್ದರು. ವರದಿಗಳ ಪ್ರಕಾರ ಈ ಪ್ರಕರಣ ಸಂಬಂಧ ಆರೋಪಿಗಳಾದ ಅಭಿನವ್ ಸಿಂಗ್ ಮತ್ತು ರವಿ ಠಾಕೂರ್ ಅವರ ಜಾಮೀನು ಅರ್ಜಿಯನ್ನು ಆನಂದ್ ವಜಾಗೊಳಿಸಿದ್ದರು. ಈ ಬೆನ್ನಲ್ಲೇ ಈ ಅಪಘಾತ ನಡೆದಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.