ದೇವಾಸ್(ಮಧ್ಯಪ್ರದೇಶ): ಕಳೆದ 48 ದಿನಗಳಿಂದ ನಾಪತ್ತೆಯಾಗಿದ್ದ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶದ ದೇವಾಸ್ನ ನೆಮಾವರ್ ಎಂಬಲ್ಲಿ ಈ ಪ್ರಕರಣ ನಡೆದಿದ್ದು, ಸುಮಾರು 48 ದಿನಗಳ ಬಳಿಕ ಜಮೀನವೊಂದರಲ್ಲಿ ಹೂತು ಹಾಕಿದ್ದ ಮೃತದೇಹಗಳನ್ನ ಪೊಲೀಸರು ಹೊರ ತೆಗೆದಿದ್ದಾರೆ.
ಕಳೆದ ಮೇ 13ರಿಂದ ಇವರೆಲ್ಲರೂ ನಾಪತ್ತೆಯಾಗಿದ್ದರು. ಆರೋಪಿಗಳು ಇವರ ಶವಗಳನ್ನ ಸುಮಾರು 10 ಅಡಿ ಆಳದ ಭೂಮಿಯಲ್ಲಿ ಹೂತು ಹಾಕಿದ್ದರು. ಮೃತರನ್ನ ಮಮತಾ(45), ರೂಪಾಲಿ(21), ದಿಯಾ(14), ಪೂಜಾ(15) ಹಾಗೂ ಪವನ್(6) ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ
ರೂಪಾಲಿ ಹಾಗೂ ಸುರೇಂದ್ರ ನಡುವೆ ಕಳೆದ ಕೆಲ ವರ್ಷಗಳಿಂದ ದೈಹಿಕ ಸಂಪರ್ಕ ಇತ್ತು. ಇದೀಗ ಸುರೇಂದ್ರ ರೂಪಾಲಿಗೆ ಮೋಸ ಮಾಡಿ ಬೇರೆ ಯುವತಿ ಜತೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದನು. ಸುರೇಂದ್ರನ ನಡುವಳಿಕೆ ಬಗ್ಗೆ ರೂಪಾಲಿ ಕುಟುಂಬ ಆಕ್ಷೇಪ ಸಹ ವ್ಯಕ್ತಪಡಿಸಿತ್ತು. ಹೀಗಾಗಿ ಅವರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದ ಸುರೇಂದ್ರ ಜಮೀನಿಗೆ ಬರುವಂತೆ ತಿಳಿಸಿದ್ದನು.
ಜಮೀನಿನಲ್ಲಿ ಶವ ಹೂತು ಹಾಕಿದ್ದ ಸುರೇಂದ್ರ
ಮಾತುಕತೆ ವೇಳೆ ಮಾತಿಗೆ ಮಾತು ಬೆಳೆದಿದ್ದು ಸುರೇಂದ್ರ ತಾಳ್ಮೆ ಕಳೆದುಕೊಂಡಿದ್ದಾನೆ. ಹೀಗಾಗಿ ಎಲ್ಲರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ತದನಂತರ ಜಮೀನಿನಲ್ಲಿ 8-10 ಆಳದ ಗುಂಡಿ ತೆಗೆದು ಮುಚ್ಚಿ ಹಾಕಿದ್ದಾನೆ.
ಇದಕ್ಕೆ ಕೆಲವರು ಸಹಾಯ ಮಾಡಿದ್ದಾರೆ. ಘಟನೆ ನಡೆದ ಬಳಿಕ ಸುರೇಂದ್ರ, ರೂಪಾಲಿ ಮೊಬೈಲ್ನಿಂದ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆ ಮಾಡ್ತಿದ್ದನು. ಇದರ ಆಧಾರದ ಮೇಲೆ ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಸುರೇಂದ್ರ ಹಾಗೂ ಇತರೆ ನಾಲ್ವರು ಶಂಕಿತರ ಬಂಧನ ಮಾಡಲಾಗಿದ್ದು, ಉಳಿದ ಏಳು ಮಂದಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಕೊಲೆ ಮಾಡಿದ್ದರ ಬಗ್ಗೆ ಸಂದೇಹ ಬಾರದ ರೀತಿಯಲ್ಲಿ ರೂಪಾಯಿ ಮೊಬೈಲ್ನಿಂದ ಸುರೇಂದ್ರ ಬೇರೆ ಬೇರೆ ಸ್ಥಳಗಳಿಂದ ಸಂದೇಶ ಪೋಸ್ಟ್ ಮಾಡುತ್ತಿದ್ದನು.
ಇಲ್ಲಿ ತಾನು ಮದುವೆ ಮಾಡಿಕೊಂಡಿದ್ದು, ಉಳಿದ ಎಲ್ಲರೂ ಸುರಕ್ಷಿತವಾಗಿದ್ದಾರೆಂದು ಸಂದೇಶ ಹರಿಬಿಟ್ಟಿದ್ದಾನೆ. ರೂಪಾಲಿ ಬಳಕೆ ಮಾಡ್ತಿದ್ದ ಫೋನ್ ಪತ್ತೆ ಹಚ್ಚಿರುವ ಪೊಲೀಸರು ಆರೋಪಿಯ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿರಿ: Online classಗೆ ಮೊಬೈಲ್ ಖರೀದಿ ಬಯಕೆ: 12 ಮಾವಿನ ಹಣ್ಣಿನಿಂದ 1.2 ಲಕ್ಷ ರೂ. ಗಳಿಸಿದ ಬಾಲಕಿ!
ಸುರೇಂದ್ರ ಅನೇಕ ದಿನಗಳಿಂದ ರೂಪಾಲಿಗೆ ಪರಿಚಯವಿದ್ದ ಕಾರಣ ಮೇಲಿಂದ ಮೇಲೆ ಅವರ ಮನೆಗೆ ಭೇಟಿ ನೀಡುತ್ತಿದ್ದನು. ಈ ವೇಳೆ ಆಕೆ ಜತೆ ಸಂಬಂಧ ಹೊಂದಿದ್ದಾನೆ. ತನದಂತರ ಬೇರೆ ಮಹಿಳೆ ಜತೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದನು.
ಇದರ ಬಗ್ಗೆ ರೂಪಾಲಿಗೆ ಗೊತ್ತಾಗುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿ, ಇಬ್ಬರು ಒಟ್ಟಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಳು. ಇದರಿಂದ ಆಕ್ರೋಶಗೊಂಡಿದ್ದ ಸುರೇಂದ್ರ ಮಾತುಕತೆಗೋಸ್ಕರ ಅವರನ್ನ ಕರೆಯಿಸಿಕೊಂಡು ಕೊಲೆ ಮಾಡಿದ್ದನು.