ವಾರಣಾಸಿ/ಹರಿದ್ವಾರ: ದೇಶದಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣಗೊಳ್ಳಲು ಮಾರ್ಚ್-ಏಪ್ರಿಲ್ನಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳವೂ ಪ್ರಮುಖ ಕಾರಣ ಎಂದು ಉತ್ತರಾಖಂಡ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಜನರು ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ರಾಶಿ ರಾಶಿ ಹೆಣಗಳು ತೇಲಿಬಂದ ಗಂಗೆಯಲ್ಲಿ ಮತ್ತೊಮ್ಮೆ ಮಿಂದೆದ್ದಿದ್ದಾರೆ.
ಗಂಗಾ ದಸರಾ ದಿನದ ಪ್ರಯುಕ್ತ ಉತ್ತರ ಪ್ರದೇಶದ ವಾರಣಾಸಿ ಹಾಗೂ ಉತ್ತರಾಖಂಡದ ಹರಿದ್ವಾರದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಲು ಗಂಗಾ ನದಿಗೆ ಇಳಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಲ್ಲಿ ನಿಯೋಜನೆಗೊಂಡಿರುವ ಪೊಲೀಸರು, ಈ ಬಾರಿ ನಾವು ಜನರಿಗೆ ತಮ್ಮ ತಮ್ಮ ಮನೆಗಳಲ್ಲೇ ಪವಿತ್ರ ಸ್ನಾನ ಮಾಡಲು ಸೂಚಿಸಿದ್ದೇವೆ. ಗಡಿ ಪ್ರದೇಶದ ಜನರಿಗೆ ಮಾತ್ರ ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ತಂದವರಿಗೆ ಮಾತ್ರ ನದಿಯಲ್ಲಿ ಇಳಿಯಲು ಅವಕಾಶ ಮಾಡಿಕೊಟ್ಟಿದ್ದೇವೆ. ಕೋವಿಡ್ ಮಾನದಂಡಗಳನ್ನ ಪಾಲಿಸಲು ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಕೊರೊನಾ ಸ್ಫೋಟಕ್ಕೆ ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳೇ ಕಾರಣ: WHO
ದೇಶದಲ್ಲಿ ಕೊರೊನಾ ಅಬ್ಬರ ಕಡಿಮೆಯಾಯಿತೆಂದು ನಿಟ್ಟುಸಿರು ಬಿಡುವ ವೇಳೆಯಲ್ಲಿ ಪಂಚರಾಜ್ಯ ವಿಧಾನಸಭೆ ಚುನಾವಣೆ ಹಾಗೂ ಹಲವರು ರಾಜ್ಯಗಳಲ್ಲಿ ಉಪ ಚುನಾವಣೆಗಾಗಿ ಭಾರತದಲ್ಲಿ ರಾಜಕೀಯ ಪಕ್ಷಗಳು ಬೃಹತ್ ಚುನಾವಣಾ ರ‍್ಯಾಲಿಗಳನ್ನು ನಡೆಸಿದ್ದವು. ಮಹಾ ಶಿವರಾತ್ರಿ ಪ್ರಯುಕ್ತ ಉತ್ತರಾಖಂಡ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ದಿನವೊಂದರಲ್ಲೇ ಲಕ್ಷಾಂತರ ಜನರು ಸೇರುತ್ತಿದ್ದರು. ಇವೆಲ್ಲಾ ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಇವೆಲ್ಲದರ ಪರಿಣಾಮವಾಗಿ ದೇಶ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಯಿತು.
ಇದನ್ನೂ ಓದಿ: ಕೋವಿಡ್ ನಿಯಮ ಉಲ್ಲಂಘಿಸಿ ಕುಂಭಮೇಳ: ಉತ್ತರಾಖಂಡ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ
ಕೋವಿಡ್ ಪ್ರೋಟೋಕಾಲ್ ಉಲ್ಲಂಘಿಸಿ ಕುಂಭಮೇಳ ನಡೆಸಿದ್ದರ ವಿರುದ್ಧ ಉತ್ತರಾಖಂಡ ಹೈಕೋರ್ಟ್, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ರಾಜ್ಯ ಸರ್ಕಾರ ಲಕ್ಷಾಂತರ ಜನರ ಜೀವದೊಂದಿಗೆ ಆಟವಾಡುತ್ತಿದೆ. ಇದೊಂದು ನಿರ್ಲಕ್ಷ್ಯ ಸರ್ಕಾರನ ಎಂದು ಛೀಮಾರಿ ಹಾಕಿತ್ತು. ಇತ್ತ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‌ಒ) ಕೂಡ ವಿಶ್ವದೆಲ್ಲೆಡೆ ಕೊರೊನಾ ಸಾಂಕ್ರಾಮಿಕ ತಗ್ಗುತ್ತಿದ್ದರೂ ಭಾರತದಲ್ಲಿ ದಿಢೀರನೆ ಉಲ್ಬಣಗೊಳ್ಳಲು ಧಾರ್ಮಿಕ ಹಾಗೂ ರಾಜಕೀಯ ಸಭೆ-ಸಮಾರಂಭಗಳು ಪ್ರಮುಖ ಕಾರಣವಾಗಿದೆ ಎಂದು ಹೇಳಿತ್ತು. ಇದೀಗ ಮತ್ತೆ ಕೋವಿಡ್ 2ನೇ ಅಲೆ ತಗ್ಗುತ್ತಿದೆ, ಮತ್ತೆ ಜನರು ವೈರಸ್ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.