ಮುಂಬೈ (ಮಹಾರಾಷ್ಟ್ರ): ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಿಂದ ಮುಂಬೈ ಪೊಲೀಸ್ ಪಡೆಗೆ ವರ್ಗಾಯಿಸಲಾಗಿದೆ. ಇದುವರೆಗೆ 80ಕ್ಕೂ ಹೆಚ್ಚು ಕ್ರಿಮಿನಲ್ಗಳನ್ನು ದಯಾ ನಾಯಕ್ ಎನ್‌ಕೌಂಟರ್ ಮಾಡಿದ್ದು, ಈಗ ಪೊಲೀಸ್ ಪಡೆಗೆ ವರ್ಗಾಯಿಸಿರುವುದರಿಂದ ದೇಶದ ವಾಣಿಜ್ಯ ರಾಜಧಾನಿಯ ಅಪರಾಧಿಗಳ ಎದೆ ನಡುಗುವಂತೆ ಮಾಡಿದೆ.
ರಾಜ್ಯ ಕೇಡರ್‌ನ 1995ರ ಬ್ಯಾಚ್ ಅಧಿಕಾರಿಯಾದ ದಯಾ ನಾಯಕ್, ಎಂಪಿಎಸ್ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ನಂತರ ಪೊಲೀಸ್ ಪಡೆಗೆ ನೇಮಕವಾಗಿದ್ದರು. ನಂತರ ಪಶ್ಚಿಮ ಉಪನಗರದ ಜುಹು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಮೊದಲ ಪೋಸ್ಟಿಂಗ್ ಆಗಿತ್ತು. ಆಗ ಮುಂಬೈ ಅಪರಾಧ ವಿಭಾಗದಲ್ಲಿ ಪೊಲೀಸ್ ಅಧಿಕಾರಿ ಮತ್ತು ಎನ್‌ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಅವರೊಂದಿಗೆ ದಯಾ ನಾಯಕ್ ಕೆಲಸ ಮಾಡಿದರು.
ದಯಾ ನಾಯಕ್ ಮೊದಲ ಎನ್‌ಕೌಂಟರ್: 1996ರಲ್ಲಿ ಪ್ರದೀಪ್ ಶರ್ಮಾ ಜೊತೆ ಸೇರಿ ದಯಾ ನಾಯಕ್ ಭೂಗತ ಪಾತಕಿ ಬಬ್ಲು ಶ್ರೀವಾಸ್ತನ್ ಗ್ಯಾಂಗ್ನ ಇಬ್ಬರು ಗೂಂಡಾಗಳಿಗೆ ಗುಂಡಿಕ್ಕಿದ್ದರು. ಇದೇ ಅವರ ಮೊದಲ ಎನ್‌ಕೌಂಟರ್ ಮತ್ತು ಅಲ್ಲಿಂದಲೇ ದಯಾ ನಾಯಕ್ ಎನ್‌ಕೌಂಟರ್ ಸ್ಪೆಷಲಿಸ್ಟ್ ಆಗಿ ಹೆಸರು ಮಾಡಲು ಶುರು ಮಾಡಿದರು. ಅಲ್ಲದೇ, ಮುಂಬೈನಲ್ಲಿ ದರೋಡೆಕೋರ ಅಮರ್ ನಾಯ್ಕ್ ಬಳಿ ಕೆಲಸ ಮಾಡುತ್ತಿದ್ದ ಎಲ್ಟಿಟಿಇಯ 3 ಸದಸ್ಯರನ್ನು ದಯಾ ನಾಯಕ್ ಎನ್‌ಕೌಂಟರ್ ಮಾಡಿದ್ದರು. ಜೊತೆಗೆ ದಯಾ ನಾಯಕ್ ಹೆಸರು ಕೇಳಿದ ತಕ್ಷಣ 90ರ ದಶಕದಲ್ಲಿ ಮುಂಬೈನ ದಾದಾ - ಭಾಯಿಯಂತಹ ಕ್ರಿಮಿನಲ್ ಲೋಕವೇ ನಡುಗುತ್ತಿತ್ತು ಎಂದು ಹಿರಿಯ ಪತ್ರಕರ್ತ ಘನಶ್ಯಾಮ್ ಭಡೇಕರ್ ತಿಳಿಸಿದ್ದಾರೆ.
ದಯಾ ನಾಯಕ್ ಹಲವಾರು ಭೂಗತ ಜಗತ್ತಿನ ಸಹಚರರನ್ನು ಮಟ್ಟ ಹಾಕಿದ್ದರು. ಸಾದಿಕ್ ಕಾಲಿಯಾ, ಶ್ರೀಕಾಂತ್ ಮಾಮಾ, ರಫೀಕ್ ದಿಬ್ಸ್ವಾಲಾ, ಪರ್ವೇಜ್ ಸಿದ್ದಿಕಿ, ವಿನೋದ್ ಭಟ್ಕರ್ ಮತ್ತು ಸುಭಾಷ್ ಸೇರಿದಂತೆ ಹತ್ತಾರು ಗ್ಯಾಂಗ್‌ಸ್ಟರ್‌ಗಳು ಎನ್‌ಕೌಂಟರ್ ಮಾಡುವಲ್ಲಿ ದಯಾ ನಾಯಕ್ ಯಶಸ್ವಿಯಾಗಿದ್ದರು. ಇದರಿಂದಾಗಿ ದಯಾ ನಾಯಕ್ ಮುಂಬೈನಲ್ಲಿ ಮಾತ್ರವಲ್ಲದೇ ದೇಶದಲ್ಲೇ ಎನ್‌ಕೌಂಟರ್ ಸ್ಪೆಷಲಿಸ್ಟ್ ಆಗಿಯೂ ಹೆಸರುವಾಸಿಯಾಗಿದ್ದಾರೆ. ಈಗ ಮುಂಬೈ ಪೊಲೀಸ್ ಪಡೆಗೆ ಅವರನ್ನು ವರ್ಗಾವಣೆ ಮಾಡಿರುವುದರಿಂದ ಕ್ರಿಮಿನಲ್ಗಳಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದು ಘನಶ್ಯಾಮ್ ಭಡೇಕರ್ ಅಭಿಪ್ರಾಯಪಟ್ಟರು.
ಪ್ರಸಿದ್ಧಿಯೊಂದಿಗೆ ವಿವಾದ: ಪೊಲೀಸ್ ಇಲಾಖೆಯಲ್ಲಿ ಎನ್‌ಕೌಂಟರ್ ಸ್ಪೆಷಲಿಸ್ಟ್ ಆಗಿ ಪ್ರಸಿದ್ಧಿ ಪಡೆಯುವುದೊಂದಿಗೆ ದಯಾ ನಾಯಕ್ ವಿವಾದಕ್ಕೂ ಒಳಗಾಗಿದ್ದರು. ಜೊತೆಗೆ ಅಕ್ರಮ ಆಸ್ತಿ ಸೇರಿದಂತೆ ಹಲವು ಆರೋಪಗಳು ಅವರ ವಿರುದ್ಧ ಕೇಳಿ ಬಂದಿದ್ದವು. ಅಷ್ಟೇ ಅಲ್ಲ, ಇಂತಹ ಆರೋಪಗಳು ಕೇಳಿ ಬಂದಾಗ ಅಮಾನತು ಕೂಡ ಆಗಿದ್ದರು.
ದಯಾ ನಾಯಕ್ ಕುರಿತ ಚಲನಚಿತ್ರಗಳು: ಈ ಪೊಲೀಸ್ ಅಧಿಕಾರಿ ದಯಾ ನಾಯಕ್ ಜೀವನದ ಕುರಿತು ಬಾಲಿವುಡ್‌ನಲ್ಲಿ ಹಲವಾರು ಚಲನಚಿತ್ರಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 'ಅಬ್ ತಕ್ ಛಪ್ಪನ್' ಮತ್ತು 'ದಯಾ ನಾಯಕ್ ಲೈಸೆನ್ಸ್ ಟು ಕಿಲ್' ಎಂಬ ಚಿತ್ರಗಳು ಪ್ರಮುಖವಾದವು.
ಇದನ್ನೂ ಓದಿ: ಛೋಟಾ ರಾಜನ್ ಆಪ್ತನನ್ನು ಭಾರತಕ್ಕೆ ಕರೆತಂದ ತನಿಖಾ ಸಂಸ್ಥೆಗಳು