ಶಿಮ್ಲಾ(ಹಿಮಾಚಲ ಪ್ರದೇಶ): ನಾಲ್ಕು ಅಂತಸ್ತಿನ ಕಟ್ಟಡ ಕುಸಿದು (building collapses) ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಜೀವಂತ ಸಮಾಧಿಯಾಗಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಕಟ್ಟಡದ ಅವಶೇಷಗಳಡಿಯಲ್ಲಿ ನಾಲ್ವರು ಸಿಲುಕಿದ್ದರು ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಮೊಖ್ತಾ ತಿಳಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಘಟನಾ ಸ್ಥಳಕ್ಕೆ ಧಾವಿಸಿದ್ದು, ಒಬ್ಬರ ಮೃತದೇಹವನ್ನು ಹೊರತೆಗೆದಿದ್ದು, ಇಬ್ಬರು ಗಾಯಾಳುಗಳನ್ನು ರಕ್ಷಿಸಿದ್ದಾರೆ. ಅಲ್ಲದೇ ಅವಶೇಷಗಳ ಅಡಿ ಸಿಲುಕಿರುವ ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಮೋಖ್ತಾ ತಿಳಿಸಿದ್ದಾರೆ.
ಮೃತರನ್ನು ಬಿಹಾರ ಮೂಲದ ಸುಲೇಮಾನ್ ಎಂದು ಗುರುತಿಸಲಾಗಿದೆ. ಕಸೌಲಿಯ ಪರ್ವಾನೂ ಪ್ರದೇಶದ ಮೈಕ್ರೋಟೆಕ್ ಕಂಪೇ ಸೆಕ್ಟರ್ 2ರಲ್ಲಿ ಮಧ್ಯಾಹ್ನ 1.35 ರ ಸುಮಾರಿಗೆ ಹಳೆಯ ಕಟ್ಟಡ ಕುಸಿದಿದೆ ಎಂದು ಸೋಲನ್ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ (ಡಿಇಒಸಿ) ಮಾಹಿತಿ ನೀಡಿದೆ ಎಂದು ಮೊಖ್ತಾ ತಿಳಿಸಿದ್ದಾರೆ.
ಇದನ್ನೂ ಓದಿ: ಅಕಾಲಿಕ ಮಳೆಯ ಬರೆ: ತುರ್ತು, ಮನೆ ಹಾನಿ ಪರಿಹಾರಾರ್ಥವಾಗಿ 418.72 ಕೋಟಿ ಅನುದಾನ ಬಿಡುಗಡೆ