ನವದೆಹಲಿ: ಹೊಸ ವರ್ಷಾರಂಭದಿಂದಲೂ ಶೀತಗಾಳಿ, ಮೈ ಕೊರೆಯುವ ಚಳಿಯಿಂದಾಗಿ ಉತ್ತರ ಭಾರತ ತತ್ತರಿಸುತ್ತಿದೆ. ಪಂಜಾಬ್, ರಾಜಸ್ಥಾನ, ಜಮ್ಮು, ಹರಿಯಾಣ, ಚಂಡೀಗಢ ಮತ್ತು ದೆಹಲಿ, ಉತ್ತರ ಪ್ರದೇಶ, ಬಿಹಾರ ಮತ್ತು ತ್ರಿಪುರದ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಿದೆ. ಹೀಗಾಗಿ, ರಸ್ತೆ ಸಂಚಾರ, ವಾಯುಯಾನ ಹಾಗು ರೈಲು ಸೇವೆಗಳಿಗೆ ಅಡಚಣೆ ಉಂಟಾಗುತ್ತಿದೆ.
ಗೋಚರತೆ ಲೆಕ್ಕ ಮೀಟರ್ಗಳಲ್ಲಿ..: ಇಂದು ಅತ್ಯಂತ ದಟ್ಟವಾದ ಮಂಜು ಪಂಜಾಬ್‌ನಿಂದ ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶದಾದ್ಯಂತ ಬಿಹಾರಕ್ಕೆ ವಿಸ್ತರಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಟ್ವೀಟ್ ಮಾಡಿದೆ. ಭಟಿಂಡಾ ಮತ್ತು ಆಗ್ರಾ - ತಲಾ 0. ಜಮ್ಮು ವಿಭಾಗ, ಗಂಗಾನಗರ, ಚಂಡೀಗಢ, ಅಂಬಾಲಾ, ಪಟಿಯಾಲ, ಬರೇಲಿ, ಲಕ್ನೋ, ಸುಲ್ತಾನ್‌ಪುರ, ಗೋರಖ್‌ಪುರ ಮತ್ತು ಭಾಗಲ್‌ಪುರ - ತಲಾ 25. ಹಿಸ್ಸಾರ್, ದೆಹಲಿ-ಪಾಲಮ್, ಬಹರೈಚ್, ಗಯಾ, ಪುರ್ನಿಯಾ ಮತ್ತು ಕೈಲಾಶಹರ್ - 50 ಮೀ. ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಟ್ವೀಟ್ ಮಾಡಿದೆ.
ವಿಮಾನಗಳ ಹಾರಾಟ ವಿಳಂಬ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜಿನಿಂದಾಗಿ ಕೆಲವು ವಿಮಾನಗಳ ಹಾರಾಟ (ದೆಹಲಿ-ಕಠ್ಮಂಡು, ದೆಹಲಿ-ಜೈಪುರ, ದೆಹಲಿ-ಶಿಮ್ಲಾ, ದೆಹಲಿ-ಡೆಹ್ರಾಡೂನ್, ದೆಹಲಿ-ಚಂಡೀಗಢ-ಕುಲು) ವಿಳಂಬವಾಗಿವೆ.
ರೈಲು ಸಂಚಾರದಲ್ಲಿ ವ್ಯತ್ಯಯ: ಮಂಜಿನಿಂದಾಗಿ ಉತ್ತರ ರೈಲ್ವೆ ಪ್ರದೇಶದಲ್ಲಿ 36 ರೈಲುಗಳು ತಡವಾಗಿ ಸಂಚರಿಸುತ್ತಿವೆ. 'ನಾನು ಗೋರಖ್‌ಪುರಕ್ಕೆ ಹೋಗುತ್ತಿದ್ದೇನೆ. ಮಂಜಿನಿಂದಾಗಿ ನಾನು ಸಂಚರಿಸುತ್ತಿರುವ ರೈಲು 4-4.5 ಗಂಟೆಗಳಷ್ಟು ತಡವಾಗಿ ಚಲಿಸುತ್ತಿದೆ' ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. ದೆಹಲಿ ಸರ್ಕಾರ ನಿನ್ನೆ ಜನವರಿ 12 ರವರೆಗೆ ರಾಷ್ಟ್ರ ರಾಜಧಾನಿಯಲ್ಲಿ BS-III ಪೆಟ್ರೋಲ್ ಮತ್ತು BS-IV ಡೀಸೆಲ್ ನಾಲ್ಕು ಚಕ್ರಗಳ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.
ಇದನ್ನೂ ಓದಿ: ಕತ್ತಲೆ ಸೃಷ್ಟಿಸಿದ ದಟ್ಟ ಮಂಜು: ವಿಮಾನ, ರೈಲು ಸಂಚಾರ ವ್ಯತ್ಯಯ, ಇನ್ನೆರಡು ದಿನ ಇದೇ ಸ್ಥಿತಿ