ನವದೆಹಲಿ: ಡೆಂಗ್ಯೂ, ಚಿಕೂನ್‌ಗುನ್ಯಾ ಮತ್ತು ಮಲೇರಿಯಾ ಕಾಯಿಲೆಗಳನ್ನು ಸಾಂಕ್ರಾಮಿಕ ರೋಗಗಳ ಕಾಯ್ದೆ (Epidemic Diseases Act) ಅಡಿಯಲ್ಲಿ ಅಧಿಸೂಚಿತ ರೋಗಗಳನ್ನಾಗಿ (notifiable diseases) ಗುರುತಿಸಲು ಕೇಂದ್ರ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಈ ಕಾಯಿಲೆಗಳು ಕಾಣಿಸಿಕೊಂಡಾಗ ಸಾಂಕ್ರಾಮಿಕ ರೋಗಗಳ ಕಾಯ್ದೆಯಲ್ಲಿನ ನಿಯಮದಂತೆ ಸರ್ಕಾರಕ್ಕೆ ಮಾಹಿತಿ ನೀಡುವುದನ್ನು ಅಧಿಸೂಚನೆಯಿಂದ ಕಡ್ಡಾಯಗೊಳಿಸಲಾಗಿದೆ. ಆಸ್ಪತ್ರೆಗಳು ಒದಗಿಸುವ ಅಂಕಿ ಅಂಶಗಳ ಆಧಾರದ ಮೇಲೆ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತದೆ. ಈ ನಿಯಮವನ್ನು ಅನುಸರಿಸದಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಸಾಕಷ್ಟು ಏರಿಕೆ ಕಂಡಿದೆ. ಹಿಂದಿನ ಸೋಮವಾರ ಬಿಡುಗಡೆಯಾದ ವರದಿಯ ಪ್ರಕಾರ, ದೆಹಲಿಯಲ್ಲಿ ಈ ವರ್ಷ ಸಾವಿರಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಕಳೆದ ವಾರವಷ್ಟೇ 280ಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿವೆ.
ಈ ತಿಂಗಳ ಮೊದಲ 23 ದಿನಗಳಲ್ಲಿ (23ನೇ ದಿನಾಂಕದವರೆಗೆ) ಒಟ್ಟು 665 ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿವೆ. ಅಕ್ಟೋಬರ್ 18ರಂದು ಡೆಂಗ್ಯೂಗೆ ಮೊದಲ ಸಾವು ಸಂಭವಿಸಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಮರುನಾಮಕರಣ ಪರ್ವ: 75 ಸರ್ಕಾರಿ ರಚನೆಗಳಿಗೆ ಹುತಾತ್ಮರ ಹೆಸರು